ಮಾರ್ಚ್‌ ಒಳಗೆ 7ನೇ ವೇತನ ಆಯೋಗ ಜಾರಿ: ಡಾ.ವೈ.ಎ.ನಾರಾಯಣ ಸ್ವಾಮಿ

KannadaprabhaNewsNetwork |  
Published : Jan 12, 2024, 01:47 AM ISTUpdated : Jan 12, 2024, 05:46 PM IST
11ಕೆಡಿವಿಜಿ10-ದಾವಣಗೆರೆಯಲ್ಲಿ ಗುರುವಾರ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪ್ರಾಚಾರ್ಯರು-ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ವಿಪ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ. ............11ಕೆಡಿವಿಜಿ11-ದಾವಣಗೆರೆಯಲ್ಲಿ ಗುರುವಾರ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಶೈಕ್ಷಣಿಕ ಸಮಾವೇಶದಲ್ಲಿ ವಿಪ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅಯೋಧ್ಯೆ ದಿನದರ್ಶಿಕೆ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಬಹುದಿನದ, ಪ್ರಮುಖ ಬೇಡಿಕೆಗಳಲ್ಲಿ ಒಂದಾದ 7ನೇ ವೇತನ ಆಯೋಗ ಮಾರ್ಚ್‌ ಒಳಗಾಗಿ ಜಾರಿಗೊಳ್ಳುವ ಸಾಧ್ಯತೆ ಇದ್ದು, ಯಾರೊಬ್ಬರೂ ಈ ಬಗ್ಗೆ ಆತಂಕಪಡಬೇಕಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರಿ ನೌಕರರ ಬಹುದಿನದ, ಪ್ರಮುಖ ಬೇಡಿಕೆಗಳಲ್ಲಿ ಒಂದಾದ 7ನೇ ವೇತನ ಆಯೋಗ ಮಾರ್ಚ್‌ ಒಳಗಾಗಿ ಜಾರಿಗೊಳ್ಳುವ ಸಾಧ್ಯತೆ ಇದ್ದು, ಯಾರೊಬ್ಬರೂ ಈ ಬಗ್ಗೆ ಆತಂಕಪಡಬೇಕಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪ್ರಾಚಾರ್ಯರು-ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಜೆಪಿ ಸರ್ಕಾರವೇ 7ನೇ ವೇತನ ಆಯೋಗ ರಚಿಸಿತ್ತು.

 ಮಧ್ಯಂತರ ವರದಿಯಂತೆ ಶೇ.17 ವೇತನ ಹೆಚ್ಚಿಸಿತ್ತು. ಆದರೆ, ನಂತರ ಬಂದ ಕಾಂಗ್ರೆಸ್ ಸರ್ಕಾರ 7ನೇ ವೇತನ ಆಯೋಗ ಜಾರಿಗೆ ಮಾ.15ರವರೆಗೆ ಕಾಲಾವಕಾಶ ಕೇಳಿದೆ. ಲೋಕಸಭೆ, ನಂತರ ವಿಪ, ಜಿಪಂ, ತಾಪಂ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಮತ್ತೊಂದು ವರ್ಷ ವಿಳಂಬವಾಗುತ್ತದೆಂದು ಸದನದ ಬಾವಿಗಿಳಿದು ಧರಣಿ, ಸಭಾತ್ಯಾಗ ಮಾಡಿದ್ದೇವೆ ಎಂದು ಹೇಳಿದರು.

ವೇತನಕ್ಕೆ ತೊಂದರೆ ಆಗದ ರೀತಿ ಇಲಾಖೆಯಿಂದ ಕ್ರಮ ಕೈಗೊಳ್ಳಲು, ಅನುದಾನಿತ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಹ ಪ್ರಯತ್ನ ನಡೆಸುತ್ತೇವೆ. ಪಿಯು ಶಿಕ್ಷಣ ಇಲಾಖೆಯನ್ನು ಜಿಪಂ ವ್ಯಾಪ್ತಿಗೆ ತರುವ ಪ್ರಯತ್ನ ನಡೆದಾಗ ಅದಕ್ಕೆಲ್ಲಾ ನಾವು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಟ್ಟಡ ನಿರ್ಮಾಣ ನಿರ್ವಹಣೆ ಮಾತ್ರವೇ ಜಿಪಂ ಸಿಇಒಗಳಿಗೆ ವಹಿಸಲಾಗಿದೆ. 

ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆ ಕಾಪಾಡಲು ನಾವೆಲ್ಲರೂ ಬದ್ಧರಿದ್ದು, ಈಗಿರುವ ವ್ಯವಸ್ಥೆ ಬದಲಾಯಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಪಾಲಾಕ್ಷಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ರಾಜ್ಯ ಸರ್ಕಾರದ ಪ್ರಥಮಾದ್ಯತೆಯ ಮೇಲೆ ಈಡೇರಿಸಿ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಸಿ.ಬಿ.ರವಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದಗೌಡ, ಸಂಘದ ರಾಜ್ಯಾಧ್ಯಕ್ಷ ಎ.ಹೆಚ್.ನಿಂಗೇಗೌಡ, ಡಿಡಿಪಿಯು ಎಸ್.ಜಿ.ಕರಿಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವೀರೇಶ್ ಒಡೇನಪುರ, ಪಿಯು ಕಾಲೇಜುಗಳ ಪ್ರಾಚಾರ್ಯ ಸಂಘದ ಜಿಲ್ಲಾಧ್ಯಕ್ಷ ಎಸ್.ಪ್ರದೀಪಕುಮಾರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ, ಪ್ರೊ.ಸಿ.ಎಚ್.ಮುರುಗೇಂದ್ರಪ್ಪ, ಡಿ.ಆರ್.ರಮೇಶ, ರಿಜ್ವಾನ್ ಬಾಷಾ ಇತರರಿದ್ದರು. ಧಾರವಾಡದ ಹ್ಯೂಮನ್ ಮೈಂಡ್ ಸೆಟ್ ಕೋಚ್ ಮಹೇಶ ಮಾಶ್ಯಾಳ್ ವಿಶೇಷ ಉಪನ್ಯಾಸ ನೀಡಿದರು ನಿವೃತ್ತ ಪ್ರಾಚಾರ್ಯ ಡಾ.ಎಚ್.ವಿ.ವಾಮದೇವಪ್ಪ ಬೋಧನೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಇದೇ ವೇಳೆ ಹಲವಾರು ಕೃತಿ ಹಾಗೂ ಅಯೋಧ್ಯೆ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

ರಾಜ್ಯದಲ್ಲಿ 2.35 ಲಕ್ಷ ಹುದ್ದೆಗಳು ಖಾಲಿ ಇದ್ದು, ಸರ್ಕಾರಕ್ಕೆ 8 ಸಾವಿರ ಕೋಟಿ ರು. ಉಳಿತಾಯವಾಗುತ್ತಿದೆ. 7ನೇ ವೇತನ ಆಯೋಗದಲ್ಲಿ ಅದನ್ನು ಸರಿದೂಗಿಸಲು ಒತ್ತಾಯಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ ಒಳಗಾಗಿ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳ್ಳುವುದು ನಿಶ್ಚಿತ. ಉಳಿದಂತೆ ಜ್ಯೋತಿ ಸಂಜೀವಿನಿ, ಮುಂಬಡ್ತಿ, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಸೇರಿ ಶಿಕ್ಷಕರ ಅನೇಕ ಸಮಸ್ಯೆಗಳು ಪರಿಹಾರ ಕಾಣಬೇಕಿದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಡಾ.ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ