ಗೂಗಲ್‌ಪೇ, ಫೋನ್‌ ಪೇ ಮೂಲಕ ಬಸ್‌ ಟಿಕೆಟ್‌ ಸೌಲಭ್ಯ ಜಾರಿ: ಖಾಸಗಿ ಬಸ್‌ ಮಾಲೀಕರ ಸಂಘ

KannadaprabhaNewsNetwork | Published : Jun 16, 2024 1:48 AM

ಸಾರಾಂಶ

ಡಿಜಿಟಲೀಕರಣಕ್ಕೆ ಪೂರಕವಾಗಿ ಸಂಘ ಮೂರು ವರ್ಷಗಳ ಹಿಂದೆ ನಗದು ರಹಿತ ಚಲೋ ಕಾರ್ಡ್‌ ಬಳಕೆಗೆ ತಂದಿತ್ತು. ಇದನ್ನು ‘ಡಿಕೆಬಿಒಎ ಸ್ಟೂಡೆಂಟ್‌ ಕಾರ್ಡ್‌’ ಆಗಿ ಪರಿವರ್ತಿಸಲಾಗುತ್ತಿದ್ದು ಇದರಲ್ಲಿಯೂ ವಿದ್ಯಾರ್ಥಿಗಳಿಗೆ ಶೇ.60 ರಿಯಾಯಿತಿ ದರದ ಪಾಸ್‌ಗಳು ದೊರೆಯಲಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಶೀಘ್ರದಲ್ಲಿಯೇ ಯುಪಿಐ (ಗೂಗಲ್‌ಪೇ, ಪೋನ್‌ ಪೇ ಇತ್ಯಾದಿ) ಮುಖಾಂತರ ಖಾಸಗಿ ಬಸ್‌ ಟಿಕೆಟ್‌ ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ದ.ಕ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪಾಡಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲೀಕರಣಕ್ಕೆ ಪೂರಕವಾಗಿ ಸಂಘ ಮೂರು ವರ್ಷಗಳ ಹಿಂದೆ ನಗದು ರಹಿತ ಚಲೋ ಕಾರ್ಡ್‌ ಬಳಕೆಗೆ ತಂದಿತ್ತು. ಇದನ್ನು ‘ಡಿಕೆಬಿಒಎ ಸ್ಟೂಡೆಂಟ್‌ ಕಾರ್ಡ್‌’ ಆಗಿ ಪರಿವರ್ತಿಸಲಾಗುತ್ತಿದ್ದು ಇದರಲ್ಲಿಯೂ ವಿದ್ಯಾರ್ಥಿಗಳಿಗೆ ಶೇ.60 ರಿಯಾಯಿತಿ ದರದ ಪಾಸ್‌ಗಳು ದೊರೆಯಲಿವೆ. ಸಾರ್ವಜನಿಕ ಪ್ರಯಾಣಿಕರಿಗೆ ಶೇ.10ರ ರಿಯಾಯಿತಿ ದೊರೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಶೇ.60 ರಿಯಾಯಿತಿಯೊಂದಿಗೆ 40 ಮತ್ತು 50 ಟ್ರಿಪ್‌ಗಳ ಪಾಸ್‌ ಪಡೆದು ಪ್ರಯಾಣಿಸಬಹುದು. ಇದು ವಿದ್ಯಾರ್ಥಿಯ ವಾಸಸ್ಥಳದಿಂದ ಶಾಲಾ ಕಾಲೇಜಿನವರಿಗೆ ಊರ್ಜಿತವಾಗಿರುತ್ತದೆ. ವಿದ್ಯಾರ್ಥಿಗಳು ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಬಹುದು ಎಂದರು.

ಸುಮಾರು ಶೇ. 90ರಷ್ಟು ಮಂದಿ ಈ ಡಿಕೆಬಿಒಎ ಕಾರ್ಡ್‌ನ ಪ್ರಯೋಜನ ಪಡೆಯಬೇಕೆಂಬುದು ಸಂಘದ ಉದ್ದೇಶವಾಗಿದೆ. ಪಾಸ್‌ಗಳನ್ನು ಹಂಪನಕಟ್ಟೆಯ ಮಿಲಾಗ್ರಿಸ್‌ ಕಟ್ಟಡ, ಸಿಟಿಲೈಟ್‌ ಕಟ್ಟಡ, ಮಾಂಡೋವಿ ಮೋಟಾರ್ಸ್‌ ಎದುರಿನ ಸಾಗರ್‌ ಟೂರಿಸ್ಟ್‌, ಸುರತ್ಕಲ್‌ ಬಸ್‌ ನಿಲ್ದಾಣದ ಸಮೀಪದ ಸಾಯಿ ಮೊಬೈಲ್‌, ತೊಕ್ಕೊಟ್ಟು ಬಸ್‌ ನಿಲ್ದಾಣ ಸಮೀಪದ ಅನು ಮೊಬೈಲ್‌ನಿಂದ ಪಡೆದುಕೊಳ್ಳಬಹುದು. ಡಿಜಿಟಲೀಕರಣದ ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಯುಪಿಐ ಬಸ್‌ ಟಿಕೆಟ್‌ ವ್ಯವಸ್ಥೆ ಮಾತ್ರವಲ್ಲದೆ ಬಸ್‌ ಟೈಮಿಂಗ್ಸ್‌ ವ್ಯವಸ್ಥೆ ಸುಧಾರಣೆಗೆ ಜಿಪಿಎಸ್‌ ಮೂಲಕ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುವುದು. ಈ ಬಗ್ಗೆ ಮಂಗಳೂರು ಸ್ಮಾರ್ಟ್‌ ಸಿಟಿ ಲಿ.ನವರು ಕೂಡ ಯೋಜನೆ ರೂಪಿಸಿದ್ದು ಅವರು ಸಂಪರ್ಕಿಸಿದ ಕೂಡಲೇ ಪೂರಕವಾಗಿ ಸ್ಪಂದಿಸಲಾಗುವುದು ಎಂದರು.

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ಬಸ್‌ ಚಾಲಕರು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮಳೆಗಾಲದಲ್ಲಿ ವಿಶೇಷ ಜಾಗರೂಕತೆ ವಹಿಸಬೇಕು. ಫುಟ್‌ಬೋರ್ಡ್‌ನಲ್ಲಿ ನಿಲ್ಲಬಾರದು, ಟಿಕೆಟ್‌ ಮೆಶಿನ್‌ ಮುಖಾಂತರವೇ ಟಿಕೆಟ್‌ ನೀಡಬೇಕು, ಡಿಕೆಬಿಒಎ ಸ್ಟೂಡೆಂಟ್‌ ಕಾರ್ಡ್‌ನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ಸಮವಸ್ತ್ರ ಧರಿಸಬೇಕು. ಕರ್ಕಶ ಹಾರನ್‌, ಟೇಪ್‌ ರೆಕಾರ್ಡರ್‌ ಬಳಸಬಾರದು, ಬಸ್‌ ಬೇ ಒಳಭಾಗದಲ್ಲಿಯೇ ಬಸ್‌ಗಳನ್ನು ನಿಲ್ಲಿಸಬೇಕು. ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ವಿದ್ಯಾರ್ಥಿಗಳ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ತೋರಿಸಬಾರದು ಮೊದಲಾದ ಸೂಚನೆಗಳನ್ನು ಈಗಾಗಲೇ ಬಸ್‌ ಚಾಲಕರು, ನಿರ್ವಾಹಕರಿಗೆ ನೀಡಲಾಗಿದೆ ಎಂದು ಅಜೀಜ್‌ ಪರ್ತಿಪಾಡಿ ತಿಳಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್‌, ಉಪಾಧ್ಯಕ್ಷ ಕೆ.ರಾಮಚಂದ ನಾಯಕ್‌, ಮಾಜಿ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಇದ್ದರು.

Share this article