- ಹರಿಹರದಲ್ಲಿ ಪ್ರೊ. ಬಿ.ಕೃಷ್ಣಪ್ಪ, ಡಾ.ಅಂಬೇಡ್ಕರ್ ಜಯಂತಿ ಸಮಾರಂಭ
- - - ಕನ್ನಡಪ್ರಭ ವಾರ್ತೆ ಹರಿಹರಸಿಟಿಜನ್ಸ್ ಅಮೆಂಡ್‌ಮೆಂಟ್ ಆಕ್ಟ್ (ಸಿಎಎ) ಕಾಯ್ದೆಯು ತಾರತಮ್ಯತೆಯಿಂದ ಕೂಡಿದೆ. ಧರ್ಮ ಆಧಾರಿತವಾಗಿ ಜಾರಿಗೊಳಿಸುತ್ತಿರುವ ಈ ಕಾಯ್ದೆ ಅಪಾಯಕಾರಿಯಾಗಿದೆ. ಸರಿಯಾದ ದಾಖಲೆ ಇಲ್ಲದ ಭಾರತೀಯರನ್ನು ಕ್ರಮೇಣ ಹೊರಗಟ್ಟುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ, ಸಾಹಿತ್ಯ ರಚನಕಾರ ಹಂಸಲೇಖ ಆತಂಕ ವ್ಯಕ್ತಪಡಿಸಿದರು.
ನಗರದ ಹೊರವಲಯದ ಮೈತ್ರಿವನದಲ್ಲಿ ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ, ಸಿವಿಜಿ ಬಾಣಗೆರೆ, ಏಕಾಂತಗಿರಿ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ಮತ್ತು ವಿಶ್ವ ಕಾರ್ಮಿಕ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ವಿಮೋಚನೆ, ಸುಧಾರಣೆ, ಕ್ರಾಂತಿಕಾರಕ ಮತ್ತು ಪರ್ಯಾಯ ಎಂಬ ಅಂಶಗಳತ್ತ ನಮ್ಮ ಚಿತ್ತಹರಿಸಬೇಕಿದೆ. ಪ್ರಜಾತಂತ್ರವನ್ನು ೧೨ನೇ ಶತಮಾನದಲ್ಲಿಯೇ ನಮಗೆ ತಿಳಿಸಿದ ಬಸವಣ್ಣ ನಾಡಿನ ಜನತೆಯಾದ ನಾವು ಈ ಬಾರಿ ಈ ನಾಲ್ಕು ಅಂಶಗಳ ಆಧಾರದಲ್ಲಿ ದೇಶದಲ್ಲಿ ಈಗಿರುವ ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೇ ಬದಲಾಯಿಸಬೇಕಿದೆ ಎಂದು ಪ್ರತಿಪಾದಿಸಿದರು.
ಭಾರತೀಯ ಮೇಲ್ವರ್ಗದವರಿಗೆ ಭಗವದ್ಗೀತೆ, ರಾಮಾಯಣ, ಮಹಾಭಾರತವಿದೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರ್ ಆನ್, ಸಿಖ್ಖರಿಗೆ ಗುರು ಗ್ರಂಥ ಸಾಹಿಬ್, ಬೌದ್ಧರಿಗೆ ತ್ರಿಪಿಟಿಕಾ, ಜೈನರಿಗೆ ಆಗಮ ಸೂತ್ರಗಳಿವೆ. ಅದೇ ರೀತಿ ಮೇಲ್ವರ್ಗದವರಿಗಾಗಿ ದೇಶದಲ್ಲಿ ಕೋಟ್ಯಂತರ ದೇವಸ್ಥಾನಗಳೂ ಇವೆ. ಆದರೆ, ದೇಶದ ಶೇ.90 ರಷ್ಟು ಇರುವ ಶೋಷಿತ, ಹಿಂದುಳಿದ ವರ್ಗದವರ ಅಧ್ಯಾತ್ಮಿಕ ಹಸಿವನ್ನು ನೀಗಿಸುವ ಧರ್ಮಗ್ರಂಥ ಹಾಗೂ ದೇವಸ್ಥಾನಗಳ ಅಗತ್ಯವಿದೆ. ಈ ಕುರಿತು ಚಿಂತನೆ ನಡೆಯಬೇಕಿದೆ ಎಂದು ಹಂಸಲೇಖ ಅಭಿಪ್ರಾಯ ವ್ಯಕ್ತಪಡಿಸಿದರು.ಬೆಂಗಳೂರಿನ ಸಾಹಿತಿ, ಸಂಶೋಧಕ ವೇಮಗಲ್ ಸೋಮಶೇಖರ್ ರಚಿತ ದಾಂಡಿ ಯಾತ್ರೆ ಕೃತಿಯನ್ನು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಕೃಷ್ಣಪ್ಪ ರಚಿತ ಮಹಿಳಾ ಚಳವಳಿಯ ಜನನಿ ಸಾವಿತ್ರಿಬಾ ಫುಲೆ ಕೃತಿಯನ್ನು ಹಿಮೋಫಿಲಿಯಾ ಸೊಸೈಟಿ ಆಫ್ ಇಂಡಿಯಾದ ಡಾ.ಸುರೇಶ್, ಚಿತ್ರದುರ್ಗದ ಸಾಹಿತಿ ಪ್ರೊ. ಎಚ್.ಲಿಂಗಪ್ಪ ಹಾಗೂ ಸಾಹಿತಿ ಟಿ.ಎಸ್. ರಾಜೇಂದ್ರ ಪ್ರಸಾದ್ ತೆಕಲವಟ್ಟಿ ರಚಿತ ಜನಪರ ಚರಿತ್ರೆಯ ಮರುನೋಟ, ಫುಲೆ ದಂಪತಿಗಳ ಚಿಂತನಧಾರೆ ಮತ್ತು ಈಶಾವಾಸ್ಯಂ ಕೃತಿಗಳನ್ನು ಸಾಹಿತಿ ಪ್ರೊ. ಸಿ.ವಿ.ಪಾಟೀಲ್ ಲೋಕಾರ್ಪಣೆ ಮಾಡಿದರು.
- - - -೪ಎಚ್‌ಆರ್‌ಆರ್೧:ಹರಿಹರದ ಮೈತ್ರಿವನದಲ್ಲಿ ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ಮತ್ತು ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದರು.