ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್‌ ಬೆದರಿಕೆ ಮೇಲ್‌

KannadaprabhaNewsNetwork |  
Published : May 05, 2024, 02:02 AM IST
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | Kannada Prabha

ಸಾರಾಂಶ

ಏಪ್ರಿಲ್ 29ರಂದು ಬೆಳಗ್ಗೆ 9.37 ಗಂಟೆಗೆ ಮಂಗಳೂರಿನ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಮೇಲ್ ಬಂದಿದ್ದು, ಈ ಬಗ್ಗೆ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಮೋನಿಶ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಇಮೇಲ್ ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷವೂ ಇದೇ ರೀತಿ ಇ ಮೇಲ್‌ ಮೂಲಕ ಬೆದರಿಕೆ ಹಾಕಲಾಗಿತ್ತು.

ಏಪ್ರಿಲ್ 29ರಂದು ಬೆಳಗ್ಗೆ 9.37 ಗಂಟೆಗೆ ಮಂಗಳೂರಿನ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಮೇಲ್ ಬಂದಿದ್ದು, ಈ ಬಗ್ಗೆ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಮೋನಿಶ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಉಗ್ರರ ಹೆಸರಿನಲ್ಲಿ ಇಮೇಲ್ ಸಂದೇಶ ಬರೆಯಲಾಗಿದ್ದು, ‘ವಿಮಾನ ನಿಲ್ದಾಣ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಿದ್ದೇನೆ. ಎಲ್ಲಿಯೂ ಕಾಣಿಸಿಕೊಳ್ಳದ ರೀತಿಯಲ್ಲಿ ಬಾಂಬ್‌ ಇರಿಸಿದ್ದೇನೆ. ಅಲ್ಲದೆ, ಕೆಲವು ವಿಮಾನಗಳಲ್ಲಿಯೂ ಮೂರು ಸ್ಫೋಟಕ ಸಾಮಗ್ರಿಗಳನ್ನು ಇರಿಸಿದ್ದೇನೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಗೊಳ್ಳಲಿದ್ದು, ದೊಡ್ಡ ಮಟ್ಟದ ರಕ್ತಪಾತ ಆಗಲಿದೆ. ಹೆಚ್ಚು ಜನ ಸಾಯುವುದನ್ನು ನಿರೀಕ್ಷೆ ಮಾಡುತ್ತೇವೆ. ‘ಟೆರರೈಜರ್ಸ್ 111’ ಎನ್ನುವ ಗ್ರೂಪ್ ಇದರ ಹಿಂದಿದೆ. ಇದು ಕೇವಲ ಬೆದರಿಕೆ ಅಲ್ಲ, ಟೆರರೈಸರ್ಸ್ 111 ಈ ರಕ್ತಪಾತದ ಹಿಂದೆ ಇದೆ’ ಎಂಬುದಾಗಿ ಇಂಗ್ಲಿಷಿನಲ್ಲಿ ಬೆದರಿಕೆ ಹಾಕಲಾಗಿದೆ.

ಏಪ್ರಿಲ್ 29ರಂದು ಬೆದರಿಕೆ ಪತ್ರ ಬಂದಿದ್ದು, ಇದು ತಿಳಿಯುತ್ತಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿಗಳ ಸೂಚನೆಯಂತೆ, ಬಜಪೆ ಠಾಣೆಯಲ್ಲಿ ಬೆದರಿಕೆ ಸಂದೇಶದ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ 25ಕ್ಕೂ ಅಧಿಕ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶ ಕಳುಹಿಸಿರುವುದು ಕಂಡುಬಂದಿದೆ. ಆರೋಪಿ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಪತ್ರ ಬಂದಿರುವುದನ್ನು ಗೌಪ್ಯವಾಗಿಟ್ಟು ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಮಂಗಳೂರು ವಿಮಾನ ನಿಲ್ದಾಣಕ್ಕೆ 2023 ಡಿಸೆಂಬರ್‌ 26ರಂದು ಟ್ಯೂನಿಂಗ್‌ ಎನ್ನುವ ಅನಾಮಧೇಯ ಹೆಸರಿನಲ್ಲಿ ಬಾಂಬ್‌ ಬೆದರಿಕೆ ಇ ಮೇಲ್ ರವಾನೆಯಾಗಿತ್ತು. ಇದಲ್ಲದೆ ಈ ವಿಮಾನ ನಿಲ್ದಾಣಕ್ಕೆ ಹುಸಿ ಬೆದರಿಕೆ ಕರೆಗಳೂ ಬಂದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. \

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌