ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ

KannadaprabhaNewsNetwork | Published : Mar 14, 2025 12:33 AM

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮೂಲಭೂತ ಸೌಲಭ್ಯ ಹಾಗೂ ನುರಿತ ಶಿಕ್ಷಕರ ನೇಮಕವಾದಲ್ಲಿ ಮಾತ್ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಆಶಯ ಈಡೇರಲಿದೆ. ತನ್ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗಲಿದೆ.

ಕೊಪ್ಪಳ:

ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023ನ್ನು ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ್ ಹೇಳಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009 ಅನುಷ್ಠಾನ ಕುರಿತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮೂಲಭೂತ ಸೌಲಭ್ಯ ಹಾಗೂ ನುರಿತ ಶಿಕ್ಷಕರ ನೇಮಕವಾದಲ್ಲಿ ಮಾತ್ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಆಶಯ ಈಡೇರಲಿದೆ. ತನ್ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗಲಿದೆ ಎಂದರು.

ಖಾಸಗಿ ಶಾಲೆಗಳು ತಮ್ಮ ಶಾಲೆಯ ಫಲಿತಾಂಶ ಉತ್ತಮಪಡಿಸಿಕೊಳ್ಳಲು 9ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 10ನೇ ತರಗತಿಗೆ ದಾಖಲಿಸಿಕೊಳ್ಳದೆ ವರ್ಗಾವಣೆ ಪ್ರಮಾಣ ಪತ್ರ ನೀಡುತ್ತಿರುವ ಪ್ರಕರಣ ಕಂಡುಬರುತ್ತಿದೆ. ಕೆಲ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡದೆ ಇರುವ ಕುರಿತು ಸಹ ದೂರುಗಳು ಆಯೋಗಕ್ಕೆ ಬಂದಿವೆ. ಹೀಗಾಗಿ ಅನದಾನಿತ ಮತ್ತು ಅನುದಾನರಹಿತ ಶಾಲೆಯ ಮುಖ್ಯಶಿಕ್ಷಕರ ಕೊಠಡಿಯಲ್ಲಿ ಆರ್‌ಟಿಐ ಸೆಲ್‌ನ ಸಂಪೂರ್ಣ ಮಾಹಿಯ ನಾಮಫಲಕ ಹಾಕಬೇಕೆಂದು ಸೂಚಿಸಿದರು.

ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023ರ ಅಡಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಪೋಷಕರ ಸಮಿತಿ ರಚಿಸಿ ಸಭೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದ ಅವರು, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಅಂತಹ ಮಕ್ಕಳು ಕಂಡುಬಂದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಿರುವ ಶಿಕ್ಷಣ ಕಾರ್ಯಪಡೆ, ಮಕ್ಕಳ ರಕ್ಷಣಾ ಸಮಿತಿ ಶಾಲೆಗೆ ಕರೆತರಬೇಕು. ಈ ಎರಡು ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಹಾವಳಿ ಅತ್ಯಧಿಕವಾಗಿದೆ. ಕೇಲವು ಕೋಚಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದ್ದು, ಮಕ್ಕಳಿಗೆ ನೀಡಿರುವ ಸೌಲಭ್ಯ ತೀರಾ ನಿಕೃಷ್ಟವಾಗಿವೆ. ಸ್ವಚ್ಛವಾದ ಪರಿಸರ, ಮಲಗಲು ಕೋಣೆ, ಸುರಕ್ಷತಾ ಕ್ರಮಗಳಲ್ಲಿ. ಸಂಬಂಧಿಸಿದ ಅಧಿಕಾರಿಗಳು ಕೊಂಚಿಂಗ್ ಸೆಂಟರ್, ಅನಧಿಕೃತ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಲೋಪವಿರುವ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮಕೈಗೊಂಡು ವರದಿಯನ್ನು ಮಕ್ಕಳ ರಕ್ಷಣಾ ಆಯೋಗಕ್ಕೆ ನೀಡಬೇಕು. ತಪ್ಪಿದಲ್ಲಿ ಆಯೋಗವು ಸೂಮೂಟೋ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ರಾಮತ್ನಾಳ್‌ ಎಚ್ಚರಿಸದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Share this article