ಕೇರಳ ಮಾದರಿಯಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟ್‌ಫಂಡ್ ವ್ಯವಸ್ಥೆ ಜಾರಿ ಮಾಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ವಿಜಯಪುರ : ಕೇರಳ ಮಾದರಿಯಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟ್‌ಫಂಡ್ ವ್ಯವಸ್ಥೆ ಜಾರಿ ಮಾಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗಿರುವ ಸಂಜೀವಿನಿ (ಎನ್.ಆರ್.ಎಲ್.ಎಂ) ಘಟಕದ ಉದ್ಘಾಟನೆ, ಗ್ರಾಮ ಪಂಚಾಯತಿಯ ಕಟ್ಟಡಕ್ಕೆ ಅಡಿಗಲ್ಲು ಹಾಗೂ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ಅವರು ಮಾತನಾಡಿದರು. ತಮಿಳುನಾಡು ಮತ್ತು ಕೇರಳಗಳಲ್ಲಿ ಚಿಟಫಂಡ್ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ. ಕೇರಳದಲ್ಲಿ ಸುಮಾರು ₹ 25000 ಕೋಟಿಗಿಂತಲೂ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಅದೇ ರೀತಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟ್‌ಫಂಡ್ ವ್ಯವಸ್ಥೆ ಜಾರಿ ಮಾಡುವ ಮೂಲಕ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬುವ ಚಿಂತನೆ ನಡೆದಿದೆ ಎಂದು ಹೇಳಿದರು.
ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ ತೊರವಿ, ಅತಾಲಟ್ಟಿ, ಕಣಮುಚನಾಳ, ತೊನಶ್ಯಾಳ, ಹೊನಗನಹಳ್ಳಿ, ಸವನಹಳ್ಳಿಗೆ ಗ್ರಾಮಗಳಿಗೆ ನೀರು ಒದಗಿಸಲಾಗುವುದು. ಎರಡ್ಮೂರು ವರ್ಷಗಳಲ್ಲಿ ಈ ಭಾಗದಲ್ಲಿ ನೀರಾವರಿಯಾಗಲಿದೆ. ಶೀಘ್ರದಲ್ಲಿ 2ನೇ ಪ್ಯಾಕೆಜ್ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲು, ಸಿಎಂ ಮತ್ತು ನೀರಾವರಿ ಸಚಿವ, ಡಿಸಿಎಂ ಅವರಿಗೆ ಮನವಿ ಮಾಡಲಾಗುವುದು. ಈಗಾಗಲೇ ಜಾಕವೆಲ್ ಕೆಲಸ ಪ್ರಾರಂಭವಾಗಿದ್ಧಾಗಿ ತಿಳಿಸಿದರು.
ಇದು ₹ 1 ಕೋಟಿ ವೆಚ್ಚದಲ್ಲಿ ಹೊನಗನಹಳ್ಳಿ- ದದಾಮಟ್ಟಿ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಸವನಹಳ್ಳಿ- ಹಿಟ್ನಳ್ಳಿ ಕಾಮಗಾರಿ ಮುಕ್ತಾಯವಾಗಿದೆ. ಹೊನಗನಹಳ್ಳಿ- ಸನವಹಳ್ಳಿ ರಸ್ತೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಹೊನಗನಹಳ್ಳಿ- ಸವನಹಳ್ಳಿ ಅಂಡರಪಾಸ್ ಸೇತುವೆಗೆ ₹ 80 ಲಕ್ಷ ನೀಡಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ನಮ್ಮ ಮತಕ್ಷೇತ್ರದ ಶಾಲೆಗಳಿಗೆ ಕಟ್ಟಡ ನೀಡಲು ಸಿ.ಎಸ್.ಆರ್ ನಲ್ಲಿ ಮುಂದಿನ ಆರು ತಿಂಗಳಲ್ಲಿ ಶಾಲೆಗಳ ರೂಂ, ಡೆಸ್ಕ್, ಶೌಚಾಲಯ ಸೇರಿದಂತೆ ಸಕಲ ಸೌಕರ್ಯ ಒದಗಿಸಲಾಗುವುದು. ಅದರಂತೆ ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ₹ 2.10 ಕೋಟಿ ವೆಚ್ಚದಲ್ಲಿ ಕಾರಜೋಳ ಬಳಿ ಬಾವಿ ತೆರೆಯುವ ಕೆಲಸ ನಡೆದಿದ್ದು, ಹೊನಗನಹಳ್ಳಿ, ಸವನಹಳ್ಳಿ, ತೊನಶ್ಯಾಳಕ್ಕೆನೀರು ಪೂರೈಕೆಯಾಗಲಿದೆ. ಈ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮಸ್ಥರಿಗೆ ಅನುಕೂಲವಾಗಿದ್ದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಈಗ ನೌಕರಿ ಕಳೆದುಕೊಂಡಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ಸಚಿವನಾಗಿ ಚಿಂತನೆ ಮಾಡಲಾಗುವುದು ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ರಾಪಂ ಅಧ್ಯಕ್ಷ ನಚಿಕೇತನ ಬಿದರಿ, ಉಪಾಧ್ಯಕ್ಷ ರಮೇಶ ಕಾಂಬಳೆ, ಮುಖಂಡರಾದ ಎ.ಬಿ.ಶಿರೋಳ, ಶಶಿಧರ ಬಿದರಿ, ವಿಠ್ಠಲಗೌಡ ಬಿರಾದಾರ, ಮಲ್ಲಪ್ಪ ಕಾಳಪ್ಪಗೋಳ, ರಾವುತಪ್ಪ ಗಾಣಿಗೇರ, ಲಕ್ಷ್ಮಣ ಪೂಜಾರಿ, ಮಲ್ಲಿಕಾರ್ಜುನ ಹಳ್ಳಿ, ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ, ಬಬಲೇಶ್ವರ ತಾಪಂ ಇಒ ಜೆ.ಎಸ್.ಪಠಾಣ, ಗ್ರಾಪಂ. ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
ಕೋಟ್‌ಪಿಗ್ಮಿ ಏಜೆಂಟ್‌ರ ರೀತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಇದರಿಂದ ಉದ್ಯೋಗ ಸಿಗಲಿದೆ. ಇದರಿಂದ ಗೃಹಲಕ್ಷ್ಮಿ ಯೋಜನೆ ಹಣವೂ ಸದುಪಯೋಗವಾಗಲಿದೆ. ಸರ್ಕಾರವೇ ಇದನ್ನು ನಡೆಸುವುದರಿಂದ ಜನರಿಗೆ ವಿಶ್ವಾಸ ಹೆಚ್ಚಲಿದ್ದು, ಸರ್ಕಾರದ ಶ್ರೀರಕ್ಷೆಯೂ ಈ ಯೋಜನೆಗೆ ಇರಲಿದೆ. ಅಷ್ಟೇ ಅಲ್ಲ, ಹಣವೂ ಸುರಕ್ಷಿತವಾಗಿರುತ್ತದೆ. ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ