ಲೋಕಸಭಾ ಚುನಾವಣೆ ಘೋಷಣೆಯಾದ ಕೂಡಲೇ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಬೇಕು.
ಕಾರವಾರ:
ಲೋಕಸಭಾ ಚುನಾವಣೆ ಘೋಷಣೆಯಾದ ಕೂಡಲೇ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಸಭಾ ಚುನಾವಣೆ ಸಂಬ೦ಧಿಸಿದ೦ತೆ ಕೇಂದ್ರ ಚುನಾವಣಾ ಆಯೋಗ ಹೊರಡಿಸುವ ಮಾದರಿ ನೀತಿ ಸಂಹಿತೆಯನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಯಾವುದೇ ಸ್ಥರದಲ್ಲೂ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬಾರದು. ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡುವ ವಿಷಯಗಳ ಕುರಿತಂತೆ ರೂಪಿಸಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು ಎಂದರು.ನೀತಿ ಸಂಹಿತೆ ಜಾರಿಗೊಳಿಸುವ ಅವಧಿಯಲ್ಲಿ ರಾಜಕಿಯ ಮುಖಂಡರು, ರಾಜಕೀಯ ಪಕ್ಷ, ಸಚಿವರಿಗೆ ನಿಗದಿಪಡಿಸಿರುವ ಕಾರ್ಯ ವ್ಯಾಪ್ತಿಯನ್ನು ಅಧಿಕಾರಿಗಳು ತಿಳಿದು ಅದರಂತೆ ಕಾರ್ಯನಿರ್ವಹಿಸಬೇಕು. ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷಗಳಿಗ ಸರ್ಕಾರಿ ನೌಕರರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಈ ಕುರಿತಂತೆ ಸಂಬಂಧಪಟ್ಟ ನೌಕರರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.ಯಾವುದೇ ಸಬೂಬು ಹೇಳಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ತಮಗೆ ವಹಿಸಲಾಗುವ ಚುನಾವಣಾ ಕೆಲಸವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಸರ್ಕಾರಿ ನೌಕರರು ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುವುದು, ಬೆಂಬಲಿಸುವುದು, ಕಮೆಂಟ್ ಮಾಡುವುದು, ಮತ್ತೊಬ್ಬರಿಗೆ ಕಳುಹಿಸುವುದು ನೀತಿ ಸಂಹಿತೆಯ ಉಲ್ಲಂಘನೆ ವ್ಯಾಪ್ತಿಗೆ ಬರಲಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಪೊಲೀಸ್ ವರಿಷ್ಠ ಸಿ.ಟಿ. ಜಯಕುಮಾರ ಹಾಗೂ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.