ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ಗಳ ದಿನ ಜಾರಿ ಶ್ಲಾಘನೀಯ

KannadaprabhaNewsNetwork | Published : Dec 30, 2024 1:04 AM

ಸಾರಾಂಶ

ಕಂಪ್ಯೂಟರ್ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಚಾರ್ಲ್ಸ್‌ ಬ್ಯಾಬೇಜ್ ಜನ್ಮದಿನಾಚರಣೆ ಹೆಸರಿನಲ್ಲಿ ಸರ್ಕಾರ ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದು ನ್ಯಾಮತಿ ತಾಲೂಕು ಪಂಚಾಯಿತಿ ಇಒ ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

- ನ್ಯಾಮತಿ ತಾಪಂ ಇಒ ರಾಘವೇಂದ್ರ ಸಂತಸ । ಹೊನ್ನಾಳಿ ಸಾಮರ್ಥ್ಯ ಸೌಧದಲ್ಲಿ ನಡೆದ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಂಪ್ಯೂಟರ್ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಚಾರ್ಲ್ಸ್‌ ಬ್ಯಾಬೇಜ್ ಜನ್ಮದಿನಾಚರಣೆ ಹೆಸರಿನಲ್ಲಿ ಸರ್ಕಾರ ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದು ನ್ಯಾಮತಿ ತಾಲೂಕು ಪಂಚಾಯಿತಿ ಇಒ ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ಕ್ಲರ್ಕ್ ಕಂ ಗ್ರಾಪಂ ಕಂಪ್ಯೂಟರ್ ಆಪರೇಟರ್ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾ.ಪಂ.ಗಳಲ್ಲಿ ಕಂಪ್ಯೂಟರ್ ಆಪರೇಟರ್ ಇಲ್ಲದೇ ಯಾವುದೇ ಕೆಲಸಗಳು ನಡೆಯಲು ಸಾಧ್ಯವಿಲ್ಲ. ಇಂದು ಎಲ್ಲ ಕೆಲಸಕ್ಕೂ ಕಂಪ್ಯೂಟರ್ ಆಪರೇಟರ್‌ಗಳು ಬೇಕಾಗಿದ್ದಾರೆ ಎಂದರು.

ಡೇಟಾ ಎಂಟ್ರಿ ಆಪರೇಟರ್‌ಗಳು ಇಂದು ಗ್ರಾಮೀಣರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಿಗುವ ಸೌಲಭ್ಯಗಳನ್ನು ಸಾರ್ವಜನಿಕರ ಹತ್ತಿರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಶ್ರಮವನ್ನು ಗುರುತಿಸಿ ಸರ್ಕಾರ ಕಂಪ್ಯೂಟರ್ ಆಪರೇಟರ್ ದಿನ ಘೋಷಣೆ ಮಾಡಿದೆ. ಡೇಟಾ ಎಂಟ್ರಿ ಆಪರೇಟರ್‌ಗಳ ವೇತನ ಕಡಿಮೆ, ಬಹಳ ಕೆಲಸ ಎಂಬ ನೋವು ನಿಮ್ಮಲ್ಲಿದೆ. ಈ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ನ್ಯಾಮತಿ ತಾಪಂ ಪ್ರಭಾರ ಸಹಾಯಕ ನಿರ್ದೇಶಕ ಸಂಗಮೇಶ್ ಮಾತನಾಡಿ, ಗ್ರಾಪಂ ಸೇರಿದಂತೆ ಇತರೆ ಇಲಾಖೆಗಳಲ್ಲಿ ಗಣಕೀಕೃತ ಕೆಲಸವಾಗುತ್ತಿದೆ. ಇದರಿಂದ ಭ್ರಷ್ಟಾಚಾರ ಕೂಡ ಕಡಿಮೆಯಾಗುತ್ತಿದೆ ಎಂದರು.

ಗ್ರಾಪಂ ಕಂಪ್ಯೂಟರ್ ಆಪರೇಟರ್ ರಾಜ್ಯಾಧ್ಯಕ್ಷ ಭೀಮರೆಡ್ಡಿ ಪಾಟೀಲ್ ಮಾತನಾಡಿ, ಸತತ ಎರಡು ವರ್ಷಗಳ ಪ್ರಯತ್ನದ ಫಲವಾಗಿ ಸರ್ಕಾರ ಅನೇಕ ಗೊಂದಲಗಳ ನಡುವೆ ದಿನಾಚರಣೆ ಆಚರಿಸಲು ನಿರ್ಧರಿಸಿದೆ. ಗ್ರಾಪಂಗಳಲ್ಲಿ ಕಾರ್ಯಭಾರ ಒತ್ತಡ ಇದೆ. ಯಾವುದೇ ಸರ್ಕಾರ ಇರಲಿ, ಕೆಲಸಗಳಲ್ಲಿ ಒತ್ತಡ ಇದ್ದೇ ಇರುತ್ತದೆ. ಆ ಒತ್ತಡಗಳನ್ನು ಮೀರಿ ನಾವು ಕೆಲಸ ಮಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಯಿಂದ ಕಾರ್ಯದರ್ಶಿ ಹುದ್ದೆಗೆ ಪದನ್ನೋತಿ ಹೊಂದಿದ ಸವಿತ, ಮಂಜುಳ ಬಾಯಿ ಅವರನ್ನು ಸನ್ಮಾನಿಸಲಾಯಿತು.

ತಾಪಂ ವ್ಯವಸ್ಥಾಪಕ ಮಹ್ಮದ್ ರಫೀಕ್, ಜಿಲ್ಲಾ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಸಿದ್ದೇಶ್, ಅವಳಿ ತಾಲೂಕಿನ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಜಿ.ಎಸ್. ಪ್ರದೀಪ್, ನ್ಯಾಮತಿ ತಾಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ರಾಜು, ಕುಳಗಟ್ಟೆ ರವಿ, ವಿಶ್ವನಾಥ್, ಶಿಲ್ಪ, ಮಹೇಶ್‌ ರೆಡ್ಡಿ, ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಇದ್ದರು.

- - - -29ಎಚ್.ಎಲ್.ಐ1.ಜೆಪಿಜಿ:

ಕಾರ್ಯಕ್ರಮದಲ್ಲಿ ನ್ಯಾಮತಿ ತಾಪಂ ಇಒ ರಾಘವೇದ್ರ ಮಾತನಾಡಿದರು.

Share this article