ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಕೊಳ್ಳುವ ಶಕ್ತಿಯಿಲ್ಲದವರ ಪರವಾದ ಯೋಜನೆಯಾಗಿವೆ. ವಿಶ್ವದಾದ್ಯಂತ ಈ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಂತಹ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುವ ಮೂಲಕ ಬೌದ್ಧಿಕ ದಿವಾಳಿತನ ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಟೀಕಿಸಿದರು.
ಸರ್ಕಾರದಿಂದ ಅರ್ಹ ಬಡಕುಟುಂಬಗಳಿಗೆ ವಿನಿಯೋಗವಾಗುವ ಈ ಹಣ ಐಷಾರಾಮಿ ವ್ಯವಸ್ಥೆಗೆ ಬಳಕೆಯಾಗದೇ ವಿವಿಧ ರೂಪದಲ್ಲಿ ಸಮಾಜದಲ್ಲೇ ಹಂಚಿಕೆಯಾಗುತ್ತದೆ. ಈವರೆಗೆ ಶೇ.98 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆತಿದೆ. ತಾಂತ್ರಿಕ ಕಾರಣಗಳಿಂದ ವಂಚಿತರಾಗಿದ್ದಲ್ಲಿ ಸಮಾವೇಶದ ದಿನ ಸ್ಥಳದಲ್ಲೇ ಸರಿಪಡಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆ ಫಲಾನುಭವಿ ಕುಟುಂಬಗಳಿಗೆ ತಿಂಗಳಿಗೆ ಕನಿಷ್ಠ ₹6 ಸಾವಿರ ದೊರೆಯುತ್ತಿದ್ದು, ನಿರುದ್ಯೋಗಿ ಯುವಕರಿದ್ದಲ್ಲಿ ಸುಮಾರು ₹10 ಸಾವಿರದಷ್ಟು ಆರ್ಥಿಕ ನೆರವು ದೊರೆಯುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ನ್ಯಾಯಾಂಗ ಚುನಾವಣಾ ಆಯೋಗ ಸೇರಿದಂತೆ ಎಲ್ಲ ವ್ಯವಸ್ಥೆಗಳಲ್ಲೂ ತಮ್ಮ ಹಿಡಿತವನ್ನು ಸಾಧಿಸುವ ಮೂಲಕ ಹಿಟ್ಲರ್ ಮಾದರಿಯಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಕೊನೆಯ ಚುನಾವಣೆಯಾಗಲಿದೆ ಎಂದು ಟೀಕಿಸಿದರು.ಕ್ಷೇತ್ರದಲ್ಲೇ ಸುತ್ತುವ ಜ್ಞಾನೇಂದ್ರ:
ಸುದ್ದಿಗೋಷ್ಟಿಯಲ್ಲಿ ಘಟಕದ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಹಾಗೂ ಮುಡುಬಾ ರಾಘವೇಂದ್ರ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಡಿ.ಎಸ್.ವಿಶ್ವನಾಥ ಶೆಟ್ಟಿ, ಅಮರನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಜಯಪ್ರಕಾಶ್ ಶೆಟ್ಟಿ, ಆದರ್ಶ ಹುಂಚದಕಟ್ಟೆ ಮುಂತಾದವರು ಇದ್ದರು.
ಬಾಕ್ಸ್ ಪ್ರಧಾನಿ ಮೋದಿ ರಾಜಿನಾಮೆ ನೀಡಬೇಕಿತ್ತು ಮತದಾನಕ್ಕೆ ಇವಿಎಂ ಬದಲಿಗೆ ಬ್ಯಾಲೆಟ್ ವ್ಯವಸ್ಥೆ ಜಾರಿಯಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಚಾರಕ್ಕೆ ಸಂಬಂಧಿಸಿ ನೈತಿಕತೆ ಇದ್ದಲ್ಲಿ ಸುಪ್ರೀಂಕೋರ್ಟ್ ತೀರ್ಪು ಬಂದ ದಿನವೇ ರಾಜಿನಾಮೆ ಕೊಡಬೇಕಿತ್ತು. ಜಾತಿ-ಧರ್ಮ ಮತ್ತು ಹಣದ ಪ್ರಭಾವದಿಂದ ರಾಜಕೀಯ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಆಯೋಗ ಸೇರಿದಂತೆ ನ್ಯಾಯಾಂಗ ವ್ಯವಸ್ಥೆಗೂ ಕೈ ಚಾಚಿದೆ. ಇದಕ್ಕೆ ಚಂಡೀಗಡದಲ್ಲಿ ಈಚೆಗೆ ನಡೆದ ಮೇಯರ್ ಚುನಾವಣೆ ಉದಾಹರಣೆಯಾಗಿದೆ. ಈ ಬಗ್ಗೆ ಮಾಧ್ಯಮಗಳು ಚಕಾರ ಎತ್ತದಿರುವುದು ಆಶ್ಚರ್ಯದ ಸಂಗತಿ ಎಂದೂ ಹೇಳಿದರು.
ತೀರ್ಥಹಳ್ಲಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.