ಕನಿಷ್ಠ ವೇತನ ಜಾರಿ: ಅಧಿಸೂಚನೆ ವಾಪಸಾತಿಗೆ ಒತ್ತಾಯ

KannadaprabhaNewsNetwork |  
Published : Aug 20, 2026, 01:30 AM IST
ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿ.ಎ.ವೆಂಕಟೇಶ್‌ ಮಾತನಾಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕನಿಷ್ಠ ವೇತನ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಮತ್ತು ಸಮಿತಿ ರಚನೆ ಕ್ರಮವನ್ನು ವಾಪಸ್ ಪಡೆದು ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಸಿಐಟಿಯು ಹೋರಾಟಕ್ಕೆ ಕರೆ ನೀಡಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ತಿಳಿಸಿದರು

ದೊಡ್ಡಬಳ್ಳಾಪುರ: ಕನಿಷ್ಠ ವೇತನ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಮತ್ತು ಸಮಿತಿ ರಚನೆ ಕ್ರಮವನ್ನು ವಾಪಸ್ ಪಡೆದು ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಸಿಐಟಿಯು ಹೋರಾಟಕ್ಕೆ ಕರೆ ನೀಡಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಧಿಸೂಚನೆ ಅಡಿ ಲಕ್ಷಾಂತರ ಮಹಿಳೆಯರು ಕೆಲಸ ಮಾಡುವ ಬೀಡಿ, ಪ್ಲಾಂಟೇಶನ್, ಕೈಮಗ್ಗ ಮತ್ತು ಗಾರ್ಮೆಂಟ್ಸ್, ಕೃಷಿ ವ್ಯವಸಾಯ ಉತ್ಪನ್ನ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರನ್ನು ಒಳಗೊಂಡ ಒಟ್ಟು 19 ಕೈಗಾರಿಕೆಗಳಿಗೆ ಅನ್ವಯವಾಗುವುದಿಲ್ಲ. ಅದು ಮಾತ್ರವಲ್ಲದೆ ವೇತನ ಹೆಚ್ಚಳವನ್ನು 2022ರಿಂದ ಅನ್ವಯಿಸುವ ಬದಲಿಗೆ 2026 ಮೇ 22ರಿಂದ ಅನ್ವಯಿಸಿರುವುದರಿಂದ ರಾಜ್ಯದ 1.77 ಕೋಟಿ ಕಾರ್ಮಿಕರು 4 ವರ್ಷಗಳ ವೇತನ ಹೆಚ್ಚಳದಿಂದ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಸಿಐಟಿಯು ರಾಜ್ಯ ಸಮಿತಿ ಖಂಡಿಸುತ್ತದೆ ಎಂದು ಹೇಳಿದರು.

84 ಉದ್ಯಮಗಳಿಗೆ ಏಕರೂಪ, ಸಾಮಾನ್ಯ ಅಧಿಸೂಚನೆ ಬಂದಿದೆ. 4 ವಲಯಗಳ ಬದಲಿಗೆ 3 ವಲಯಗಳನ್ನಾಗಿ ಮಾರ್ಪಡಿಸಲಾಗಿದೆ. ಕಾರ್ಮಿಕ ಚಳವಳಿಯ ನಿರಂತರ ಹೋರಾಟದ ಪ್ರತಿಫಲವಾಗಿತ್ತು. ಆದರೆ 2017ರ ನಂತರದ ಆಗಿರುವ ಶೇ.60 ವೇತನ ಹೆಚ್ಚಳ ಬಂಡವಾಳಕ್ಕೆ ದೊಡ್ಡ ಹೊರೆಯಾಗುವುದಿಲ್ಲ. ಬದಲಾಗಿ ಸುಮಾರು ಒಂದು ದಶಕದ ಬೆಲೆ ಏರಿಕೆಗೆ ಸೂಕ್ತ ಹೆಚ್ಚಳವಲ್ಲ ಎಂಬುದೇ ಸತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಸಿಐಟಿಯು ಜಿಲ್ಲಾಧ್ಯಕ್ಷ ಸಿ.ನರಸಿಂಹಮೂರ್ತಿ ಮಾತನಾಡಿ, ಪರಿಷ್ಕೃತ ಕನಿಷ್ಠ ವೇತನದ ಹೆಚ್ಚಳದಿಂದ ಹಣಕಾಸಿನ ಹೊರೆ ಬರುವುದರಿಂದ ಈ ಆದೇಶವನ್ನು ತಡೆ ಹಿಡಿಯಬೇಕು ಎಂಬ ಅಭಿಪ್ರಾಯದಲ್ಲಿ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚಿಸಿ ಕನಿಷ್ಠ ವೇತನ ಜಾರಿಯ ಅಧಿಕೃತ ಅಧಿಸೂಚನೆ ತಡೆಹಿಡಿದಿದ್ದಾರೆ. ಕಾರ್ಮಿಕ ವಿರೋಧಿ ನೀತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲದು ಎಂದರು.

ರಾಜ್ಯದಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ದಿಮೆಗಳು ತಮ್ಮದೇ ಆದ ಸ್ವಂತ ಉತ್ಪನ್ನಗಳನ್ನು ಮಾಡುವುದಿಲ್ಲ. ದೊಡ್ಡ ಬಂಡವಾಳಗಾರರಿಗೆ ಅಗತ್ಯ ಮೂಲ ಹಾಗು ಬಿಡಿಭಾಗಗಳನ್ನು ಉತ್ಪಾದಿಸುತ್ತಾರೆ ಅಷ್ಟೆ. ಅವರಿಗೆ ಉತ್ಪಾದನಾ ವೆಚ್ಚವನ್ನು ಕೊಡಬೇಕಾದವರು ದೊಡ್ಡಮಾಲಿಕರೇ ಆಗಿರುತ್ತಾರೆ. ವೇತನದ ಹೆಚ್ಚಳದಿಂದ ಆಗುವ ಉತ್ಪಾದನಾ ವೆಚ್ಚವನ್ನು ದೊಡ್ಡ ಬಂಡವಾಳಗಾರರು ಬರಿಸಿದಲ್ಲಿ ಸಣ್ಣ ಬಂಡವಾಳಿಗರಿಗೆ ಸೂಚಿತ ವೇತನವನ್ನು ಕಾರ್ಮಿಕರಿಗೆ ನೀಡುವುದು ಹೊರೆಯಾಗುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಜಾಂಚಿ ಮೋಹನ್ ಬಾಬು ಎಚ್ ಏನ್, ಉಪಾಧ್ಯಕ್ಷರಾದ ಎಲ್ ಆರ್ ನಳಿನಾಕ್ಷಿ, ಶಾಂಬಣ್ಣ, ವಿಷಕಂಠ, ಕಾರ್ಯದರ್ಶಿ ಅಂಜುಮ್ ಖಾನ್, ಎಲ್.ಸಿ ಸುಮಾ, ಅನಿಲ್ ಗುಪ್ತ, ಮುಖಂಡರಾದ ಮಣೀಶ್ ಶರ್ಮ, ಬೀರೇಶ್ ಗುಪ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

19ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್‌ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗದಿರಲಿ: ಶಾಸಕ ಸಿ.ಬಿ.ಸುರೇಶ್‌ಬಾಬು
ರಸ್ತೆ ಮಾರ್ಜಿನ್ ನಿಂದ 30 ಅಡಿ ಬಿಟ್ಟು ಮನೆ ಕಟ್ಟಲು ಅನುಮತಿಸಿ: ಖಾತೆದಾರರ ಆಗ್ರಹ