ಹೊಸ ಆಸ್ತಿ ತೆರಿಗೆ ಪದ್ಧತಿ ಏಪ್ರಿಲ್‌ಗೆ ಜಾರಿ ಅನುಮಾನ

KannadaprabhaNewsNetwork |  
Published : Mar 13, 2024, 02:05 AM IST
ಬಿಬಿಎಂಪಿ | Kannada Prabha

ಸಾರಾಂಶ

ಒಂದು ದಿನದ ಹಿಂದಷ್ಟೇ ಘೋಷಣೆಯಾಗಿದ್ದ ಹೊಸ ಆಸ್ತಿ ತೆರಿಗೆ ನೀತಿಯು ಏಪ್ರಿಲ್‌ನಿಂದ ಜಾರಿಗೆ ಬರುವುದು ಅನುಮಾನವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ, ನಗರದಲ್ಲಿ ಭಾರೀ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಏಪ್ರಿಲ್‌ನಿಂದ ಜಾರಿಗೆ ಬರಬೇಕಿದ್ದ ಬಿಬಿಎಂಪಿಯ ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ಪದ್ಧತಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ನೀಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿಯು ಫೆ.18ರಂದು ಮಾರ್ಗಸೂಚಿ ಆಧಾರಿಸಿ ಆಸ್ತಿ ತೆರಿಗೆ ವಿಧಿಸುವ ಕುರಿತು ಕರಡು ಅಧಿಸೂಚನೆಯನ್ನು ಪ್ರಕಟಿಸಿತ್ತು. ಈ ಕುರಿತು ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 15 ದಿನ ಕಾಲಾವಕಾಶ ನೀಡಿತ್ತು. ಸುಮಾರು 2500 ರಷ್ಟು ಆಕ್ಷೇಪಣೆ ಸಲ್ಲಿಕೆಯಾಗಿದ್ದವು.

ಈ ನಡುವೆ ಕಳೆದ ಸೋಮವಾರ ಉಪ ಮುಖ್ಯಮಂತ್ರಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಏಪ್ರಿಲ್‌ನಿಂದ ಆಸ್ತಿ ತೆರಿಗೆ ಹೆಚ್ಚಳದ ಕುರಿತು ವಿವರಣೆ ನೀಡಿದ್ದರು. ಬಳಿಕ ಈ ಕುರಿತು ಬೆಂಗಳೂರಿನ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ಅಲ್ಲದೆ, ಲೋಕಸಭಾ ಚುನಾವಣೆಗೆ ಆಸ್ತಿ ತೆರಿಗೆ ಹೆಚ್ಚಳವು ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಜತೆಗೆ, ನಗರದಲ್ಲಿ ಭಾರೀ ನೀರಿನ ಸಮಸ್ಯೆ ಇದೆ. ಬರಗಾಲದ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮಾರ್ಗಸೂಚಿ ಆಧಾರಿಸಿ ಆಸ್ತಿ ತೆರಿಗೆ ವಿಧಿಸುವ ಪದ್ಧತಿಯನ್ನು ಏಪ್ರಿಲ್‌ನಿಂದ ಆರಂಭಿಸುವುದು ಬೇಡ. ಚುನಾವಣೆ ಮುಕ್ತಾಯದ ಬಳಿಕ ಈ ಬಗ್ಗೆ ನಿರ್ಧಾರ ಮಾಡೋಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಬಿಎಂಪಿಯ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.ಅಗತ್ಯ ಸಾಫ್ಟವೇರ್ ರಚನೆ ಆಗಿಲ್ಲ

2024-2025ರ ಏಪ್ರಿಲ್ ನಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಹೊಸ ತೆರಿಗೆ ಪದ್ಧತಿ ಜಾರಿಗೆ ಮುಖ್ಯವಾಗಿ ಅಗತ್ಯವಾದ ಸಾಫ್ಟ್‌ವೇರ್ ಅನ್ನು ಸರ್ಕಾರ ಸಿದ್ಧಪಡಿಸಿಲ್ಲ. ಇದು ಸಹ ಜಾರಿಗೆ ಇನ್ನೊಂದು ಅಡ್ಡಿಯಾಗಿದೆ. ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜನರು ಅರ್ಥಮಾಡಿಕೊಳ್ಳಲು ಮತ್ತು ಅದರ ಪ್ರಯೋಜನಗಳ ಬಗ್ಗೆ ಅವರಿಗೆ ಶಿಕ್ಷಣ ನೀಡಲು ಬಿಬಿಎಂಪಿ ಹೆಚ್ಚಿನ ಸಮಯ ನೀಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಈ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ.ಬಾಕಿ ಮೊತ್ತ ಮುಂದಿನ ವರ್ಷ ವಸೂಲಿ?

ಒಂದು ವೇಳೆ ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ಚಾಲನೆ ತಂದರೆ, ಈಗಾಗಲೇ ತೆರಿಗೆ ಪಾವತಿ ಮಾಡಿದವರಿಂದ ಬಾಕಿ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ವಸೂಲಿ ಮಾಡುವುದಕ್ಕೆ ಚಿಂತನೆ ನಡೆಸಲಾಗಿದೆ. ಅದರ ಬದಲು ಮುಂದಿನ 2025-26ನೇ ಸಾಲಿನಿಂದ ಜಾರಿ ತರುವುದಾದರೆ, ಹೊಸ ಆಸ್ತಿ ತೆರಿಗೆ ಪದ್ಧತಿಯ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದಕ್ಕೆ ನಿರ್ಧರಿಸಲಾಗಿದೆ. ಆದರೆ, ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ವಿಧಿಸುವುದನ್ನು ತಡೆ ಗಟ್ಟುವುದಕ್ಕೆ ಸಾಧ್ಯವಿಲ್ಲ. ತಡವಾದರೂ ಜಾರಿಗೆ ಬರುವುದು ಶತಸಿದ್ಧ. ಈ ಕುರಿತು ಲೆಕ್ಕ ಪರಿಶೋಧನೆಯಲ್ಲಿ ಸಾಕಷ್ಟು ಆಕ್ಷೇಪಣೆ ಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...