ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್‌ ಜಾರಿ; ಶೇ.50 ದಂಡ, ಬಡ್ಡಿ ಮನ್ನಾ

KannadaprabhaNewsNetwork |  
Published : Feb 23, 2024, 01:53 AM IST
KP | Kannada Prabha

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇ.50ರಷ್ಟು ದಂಡ ಹಾಗೂ ಬಡ್ಡಿ ಮನ್ನಾ ಮಾಡಿ ‘ಒನ್‌ ಟೈಮ್ ಸೆಟ್ಲ್‌ಮೆಂಟ್‌’ (ಓಟಿಎಸ್‌) ಯೋಜನೆಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಗುರುವಾರ ರಾಜ್ಯಪತ್ರ ಪ್ರಕಟಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇ.50ರಷ್ಟು ದಂಡ ಹಾಗೂ ಬಡ್ಡಿ ಮನ್ನಾ ಮಾಡಿ ‘ಒನ್‌ ಟೈಮ್ ಸೆಟ್ಲ್‌ಮೆಂಟ್‌’ (ಓಟಿಎಸ್‌) ಯೋಜನೆಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಗುರುವಾರ ರಾಜ್ಯಪತ್ರ ಪ್ರಕಟಿಸಿದೆ.

ಈ ಯೋಜನೆಯಿಂದ ನಗರ ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, 5- 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಸೇರಿದಂತೆ 13- 15 ಲಕ್ಷ ಜನರಿಗೆ ಅನುಕೂಲವಾಗಲಿದೆ. ಈ ಯೋಜನೆ ಅನುಕೂಲ ಪಡೆಯುವುದಕ್ಕೆ ಜುಲೈ 31ರವರೆಗೆ ಗಡುವು ನೀಡಲಾಗಿದೆ.

ತಪ್ಪು ಮಾಹಿತಿ ನೀಡಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದ ಆಸ್ತಿ ಮಾಲೀಕರಿಗೆ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ ದಂಡ ಮೊತ್ತವನ್ನು ಒಂದು ಪಟ್ಟಿಗೆ (ಶೇ.50ರಷ್ಟು) ಇಳಿಕೆ ಮಾಡಲಾಗಿದೆ. ಈ ಅಂಶವೂ ವಸತಿ ಮತ್ತು ವಾಣಿಜ್ಯ ಸೇರಿದಂತೆ ಎಲ್ಲಾ ಮಾದರಿಯ ಆಸ್ತಿ ಮಾಲೀಕರಿಗೆ ಅನ್ವಯವಾಗಲಿದೆ.

ಉಳಿದಂತೆ ಸ್ವಂತ ಉಪಯೋಗಕ್ಕೆ ಬಳಕೆ ಮಾಡುವ ಒಂದು ಸಾವಿರ ಚದರಡಿಗಿಂತ ಕಡಿಮೆ ಇರುವ ಹಾಗೂ ಕೇವಲ ನೆಲ ಮಹಡಿ ಹೊಂದಿರುವ ಟೈಲ್ಡ್ ಅಥವಾ ಶೀಟ್‌ ಚಾವಣಿ ವಸತಿ ಆಸ್ತಿಗಳಿಗೆ (ಆರ್‌ಸಿಸಿ ಅಲ್ಲದ) ಶೇ.75ರಷ್ಟು ವಿನಾಯಿತಿ ನೀಡಿ, ವಂಚಿಸಿದ ಮೊತ್ತಕ್ಕೆ ಶೇ.25ರಷ್ಟು ದಂಡ ಪಾವತಿಸುವುದಕ್ಕೆ ಸೂಚಿಸಲಾಗಿದೆ.

ಬಡವರಿಗೆ ದಂಡ ವಿನಾಯಿತಿ:

ಇನ್ನು ಗುಡಿಸಲು, ಬಡವರಿಗಾಗಿ ಸರ್ಕಾರಿ ವಸತಿ ಸೌಲಭ್ಯ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಥವಾ ಬಿಬಿಎಂಪಿಯಿಂದ ಕೊಳಗೇರಿ ಎಂದು ಘೋಷಿಸಿದ ಪ್ರದೇಶದಲ್ಲಿ ವಸತಿ ಆಸ್ತಿಗಳಲ್ಲಿ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿರುವ 300 ಚದರಡಿಗಿಂತ ಕಡಿಮೆ ವಿಸ್ತೀರ್ಣ ಇರುವ ಮನೆಗಳಿಗೆ ದಂಡ ಮೊತ್ತವನ್ನು ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.ವಿಳಂಬ ಪಾವತಿಗೂ ಬಡ್ಡಿ ಮನ್ನಾ:

ಆಸ್ತಿ ತೆರಿಗೆ ವಿಳಂಬ ಪಾವತಿ ಮೇಲಿನ ಬಡ್ಡಿ, ವಂಚಿಸಿದ ತೆರಿಗೆ ಮೇಲಿನ ಬಡ್ಡಿ, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದ ಆಸ್ತಿಗೆ ವಿಧಿಸುವ ಬಡ್ಡಿ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ.ಐದು ವರ್ಷಕ್ಕೆ ಮಿತಿ:

ಈ ಹಿಂದೆ ಆಸ್ತಿ ತೆರಿಗೆ ವಂಚಿಸಿದ ಪ್ರಕರಣದಲ್ಲಿ ವಿಧಿಸುವ ದಂಡ ಮತ್ತು ಬಡ್ಡಿಗೆ ಇಷ್ಟು ವರ್ಷಗಳು ಎಂಬ ಮಿತಿ ಇರಲ್ಲ. ಹೀಗಾಗಿ, ಬಿಬಿಎಂಪಿ ರಚನೆಯಾದಾಗಿನಿಂದ ವಂಚಿಸಿದ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತಿತ್ತು. ಇದೀಗ ವಸತಿ ಹಾಗೂ ಭಾಗಶಃ ವಸತಿಯೇತರ (ಸಣ್ಣ ವ್ಯಾಪಾರಿ) ಬಳಕೆ ಮಾಡಿಕೊಂಡ ಆಸ್ತಿಗಳಿಗೆ ವಿಧಿಸುವ ಬಡ್ಡಿ ಅಥವಾ ದಂಡವನ್ನು ಗರಿಷ್ಠ 5 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಈ ವಿನಾಯಿತಿ ಉದ್ಯಮಿಗಳು, ಕೈಗಾರಿಕೆಗಳಿಗೆ ಅನ್ವಯವಾಗುವುದಿಲ್ಲ.

ಮರು ಪಾವತಿ ಇಲ್ಲ:

ಈ ರೀತಿ ಪ್ರಕರಣದಲ್ಲಿ ಆಸ್ತಿ ತೆರಿಗೆ, ದಂಡ ಮತ್ತು ಬಡ್ಡಿ ಪಾವತಿ ಮಾಡಿದವರಿಗೆ ಮರು ಪಾವತಿ ಹಾಗೂ ಮುಂದಿನ ಸಾಲಿನಲ್ಲಿ ಹೊಂದಾಣಿಕೆ ಇರುವುದಿಲ್ಲ. ಸದ್ಯ ನೋಟಿಸ್‌ ನೋಡಿದವರಿಗೆ ಹಾಗೂ ಸಂಪೂರ್ಣವಾಗಿ ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಈ ವಿನಾಯಿತಿ ದೊರೆಯಲಿದೆ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.500ರಿಂದ 800 ಕೋಟಿ ರು. ವಸೂಲಿ

ರಾಜ್ಯ ಸರ್ಕಾರ ಪ್ರಕಟ ಪಡಿಸಿರುವ ಒಟಿಎಸ್‌ ಯೋಜನೆಯಿಂದ ಬಿಬಿಎಂಪಿಗೆ ಹಲವಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳಿಂದ 500 ರಿಂದ 800 ಕೋಟಿ ರು. ವಸೂಲಿಯಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಅಂದಾಜಿಸಿದ್ದಾರೆ.ಕನ್ನಡಪ್ರಭ ಜ.18ರಂದೇ ವಿಶೇಷ ವರದಿ ಪ್ರಕಟ

ಬಾಕಿ ವಸೂಲಿಗೆ ಆಸ್ತಿ ಮಾಲೀಕರಿಗೆ ಒಟಿಸ್‌ ಆಫರ್‌ ನೀಡಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿರುವ ಕುರಿತು ‘ಕನ್ನಡಪ್ರಭ’ ಕಳೆದ ಜನವರಿ 18 ರಂದು ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್‌ ಆಫರ್‌? ಎಂದು ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ