ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜೊತೆ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗವನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಹಿತ ಕಾಪಾಡಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ನಡೆದ ೨೦೨೩-೨೪ನೇ ಸಾಲಿನ ಪ್ರತಿಭಾ ಪುರಸ್ಕಾರ, ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಬೀಳ್ಕೊಡುಗೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುದಾನದ ಜೊತೆ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡಿರುವುದರಿಂದ ಸರ್ಕಾರದ ಮೇಲೆ ೨೨ ಸಾವಿರ ಕೋಟಿ ರು. ಆರ್ಥಿಕ ಹೊರೆ ಬಿದ್ದಿದೆ. ಇದರ ಜೊತೆಗೆ ಸರ್ಕಾರಿ ನೌಕರರಿಗೆ ಹಂತ ಹಂತವಾಗಿ ಒಪಿಎಸ್ ಸ್ಕೀಮ್ ಜಾರಿ ಮಾಡುವುದಾಗಿ ಹೇಳಿದರು.ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆಯಿದ್ದು ಬುದ್ಧಿವಂತಿಕೆಯಿಂದ ಸಾಧನೆಯನ್ನು ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಪ್ರತಿಭಾವಂತರಾಗಲು ಸಾಧ್ಯ ಎಂದರು.
ಉದ್ಯೋಗದಲ್ಲಿ ಈಗ ಪ್ಯಾಕೇಜ್ ಸಂಸ್ಕೃತಿ ದೇಶದಲ್ಲಿ ಬಂದಿದೆ. ವರ್ಷಕ್ಕೆ ಎಷ್ಟು ಪ್ಯಾಕೇಜ್ ಕೊಡುತ್ತಾರೆ ಎಂಬುದರ ಮೇಲೆ ಉದ್ಯೋಗ ಸೃಷ್ಟಿಯಾಗುತ್ತಿದ್ದು. ಮುಂದಿನ ಐದು ವರ್ಷದಲ್ಲಿ ಕರ್ನಾಟಕದ ಮೆಡಿಕಲ್ ಹಾಗೂ ಎಂಜಿನಿಯರ್ ಸೀಟುಗಳು ಉತ್ತರ ಭಾರತದ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶದ ಪಾಲಾಗುವುದು ಗ್ಯಾರಂಟಿ ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಸರ್ಕಾರಿ ನೌಕರರ ಕಾರ್ಯಪಡೆ ಅನುಷ್ಠಾನ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಜನರಿಗೆ ಮುಟ್ಟುತ್ತವೆ ಎಂದರು.
ಸರ್ಕಾರಿ ನೌಕರರು ಅಧಿಕಾರ ಕೊಟ್ಟ ಅವಕಾಶವನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರ ಕೆಲಸವನ್ನು ದೇವರ ಕೆಲಸ ಎಂದು ಪೂಜ್ಯ ಭಾವನೆಯಿಂದ ಕೆಲಸ ಮಾಡಬೇಕು ಆಗ ಜನರಿಗೂ ಸಂತೋಷ ಆಗುತ್ತದೆ ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂದರು.ಸರ್ಕಾರಿ ನೌಕರರು ಆತ್ಮತೃಪ್ತಿಯ ಜೊತೆ ಕೆಲಸ ಮಾಡಬೇಕು, ಕೆಲಸದಲ್ಲಿ ಋಣಾತ್ಮಕತೆ ಇರಬೇಕಾದರೆ ನಮ್ಮ ಯೋಚನೆಗಳು ಸರಿಯಾಗಿರಬೇಕು. ಸರ್ಕಾರಿ ನೌಕರರು ಕೆಲಸದ ಜೊತೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ ಬಹಳ ಮುಖ್ಯವಾದದ್ದು. ಮನಸ್ಸು ನಿಷ್ಕಲ್ಮಶವಾಗಿರಬೇಕಾದರೆ ಒಳ್ಳೆಯ ಪುಸ್ತಕಗಳನ್ನು ಓದಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗವನ್ನು ಯಥಾವತ್ತಾಗಿ ಜಾರಿಗೆ ತರುವುದಾಗಿ ಹೇಳಿದ್ದಾರೆ. ಎನ್‌ಪಿಎಸ್ ನೌಕರರು ಆತಂಕ ಪಡುವುದು ಬೇಡ. ಈಗಾಗಲೇ ಸರ್ಕಾರ ವರದಿಯನ್ನು ತರಿಸಿಕೊಂಡು ಒಪಿಎಸ್ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಯನ್ನು ೨೫ ಲಕ್ಷ ನೌಕರರ ಕುಟುಂಬಗಳಿಗೆ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ಯೋಜನೆಯನ್ನು ಒಂದು ತಿಂಗಳಲ್ಲಿ ಜಾರಿಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಆಡಳಿತದಲ್ಲಿ ನಗು ಕಾರ್ಯಾಗಾರವನ್ನು ನ್ಯಾಯಾಂಗ ಇಲಾಖೆ ಮುಖ್ಯ ಆಡಳಿತ ಅಧಿಕಾರಿ ಟಿ.ಎನ್. ಶಿವಕುಮಾರ್ ನಡೆಸಿಕೊಟ್ಟರು.
ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಂಭುಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಕ್ ತನ್ವೀರ್ ಆಸಿಫ್, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ನಗರಸಭೆ ಅಧ್ಯಕ್ಷ ನಾಗೇಶ್, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.