ಮಹತ್ವದ ಕಾನೂನು ರಚನೆ, ತಿದ್ದುಪಡಿಯಲ್ಲಿ ವಕೀಲರ ಪಾತ್ರ ಪ್ರಮುಖ: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ

KannadaprabhaNewsNetwork |  
Published : Jun 16, 2024, 01:55 AM ISTUpdated : Jun 16, 2024, 07:07 AM IST
15GDG7 | Kannada Prabha

ಸಾರಾಂಶ

ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ವಕೀಲರೊಂದಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಸಂವಾದ ನಡೆಸಿದರು.

 ಗದಗ;  ಮಹತ್ವದ ಕಾನೂನು ರಚನೆ, ತಿದ್ದುಪಡಿಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.

ಶನಿವಾರ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ವಕೀಲರೊಂದಿಗೆ ಸಂವಾದ ಉದ್ಘಾಟಿಸಿ ಮಾತನಾಡಿದರು.

ವಕೀಲರು ಸಮಾಜಕ್ಕೆ ಹತ್ತಿರವಿರುವ ಲೋಕಾಯುಕ್ತ ಕಾನೂನುಗಳ ಬಗ್ಗೆ ಅರಿಯಬೇಕು. ಇದರಿಂದ ಸಮಾಜದ ಸರ್ವರಿಗೂ ಸಹಾಯ ಮಾಡಲು ಅವಕಾಶವಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಸಮಾಜದಲ್ಲಿ ಎಲ್ಲರೂ ಉತ್ತಮ ಜೀವನ ನಡೆಸಬೇಕು. ಅದೇ ಸಂವಿಧಾನದ ಆಶಯ. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು.

ಸಾರ್ವಜನಿಕ ನೌಕರರ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಸ್ಥಾಪಿಸಲಾಗಿರುವ ಸಂಸ್ಥೆಯೇ ಕರ್ನಾಟಕ ಲೋಕಾಯುಕ್ತ ಸಂಸ್ಥೆ. ಸಾರ್ವಜನಿಕ ಆಡಳತದಲ್ಲಿ ಗುಣಮಟ್ಟಗಳನ್ನು ಸುಧಾರಿಸುವುದು, ಸಾರ್ವಜನಿಕ, ಸರ್ಕಾರಿ ನೌಕರರ ದುರ್ನಡತೆಯಿಂದ ಸಂಭವಿಸಿದ ಕುಂದುಕೊರತೆಗಳನ್ನು ನಿವಾರಣೆ ಮಾಡುವುದು, ತಪ್ಪಿತಸ್ಥರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984, ಭ್ರಷ್ಟಾಚಾರ ತಡೆ ಕಾಯ್ದೆ 1988, ಕರ್ನಾಟಕ ನಾಗಕ ಸೇವಾ ನಿಯಮಗಳು 1958, ಕರ್ನಾಟಕ ನಾಗಲೀಕ ಸೇವೆ (ನಡತೆ) ನಿಯಮಗಳು, 1966 ಹಾಗೂ ಕರ್ನಾಟಕ ನಾಗಲೀಕ ಸೇವೆ ನಿಯಮಗಳು, 1957 ರನ್ವಯ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡುವುದು ಈ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ.ಯಾವುದೇ ವ್ಯಕ್ತಿ ಕರ್ನಾಟಕ ರಾಜ್ಯದ ಆಡಳಿತ ನಿರ್ವಹಣೆಯಲ್ಲಿ ನಡೆದಿದೆ ಎಂದು ಹೇಳುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು ಮತ್ತು ಕರ್ತವ್ಯ ಲೋಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಸಾರ್ವಜನಿಕ, ಸರ್ಕಾರಿ ನೌಕರರ ವಿರುದ್ಧ ಮಾತ್ರ ದೂರು ನೀಡಬಹುದಾಗಿದೆ.

ಯಾವುದೇ ವ್ಯಕ್ತಿ, ಸಾರ್ವಜನಿಕ, ಸರ್ಕಾರಿ ನೌಕರ ತನ್ನ ಕರ್ತವ್ಯ ಮಾಡದೇ ಇರಲು ಅಥವಾ ಅನುಚಿತವಾಗಿ ಅಥವಾ ಅಪ್ರಮಾಣಿಕವಾಗಿ ಮಾಡಲು ಭ್ರಷ್ಟ ಅಥವಾ ಕಾನೂನು ಬಾಹಿರ ವಿಧಾನಗಳಿಂದ ಅಥವಾ ತನ್ನ ವೈಯಕ್ತಿಕ ಪ್ರಭಾವವನ್ನು ಚಲಾಯಿಸಿ ಆ ಸಾರ್ವಜನಿಕ ನೌಕರನನ್ನು ಪ್ರೇರೇಪಿಸುವುದು ಮತ್ತು ಯಾವುದೇ ವ್ಯಕ್ತಿಗೆ ಅನಗತ್ಯ ಪ್ರಯೋಜನ ನೀಡಲು ಅಥವಾ ತನಗಾಗಿಯೇ ಬೇರೊಬ್ಬ ವ್ಯಕ್ತಿಯಿಂದ ಇನಾಮು ಪಡೆದರೆ, ಪಡೆಯುವುದಕ್ಕೆ ಪ್ರಯತ್ನಿಸಿದರೆ ಅಥವಾ ಸ್ವೀಕಲಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಅನಗತ್ಯ ಪ್ರಯೋಜನವನ್ನು ನೀಡುವುದು ಅಥವಾ ನೀಡುವುದಾಗಿ ಭರವಸೆ ಕೊಟ್ಟು ಅದಕ್ಕಾಗಿ ಸಾರ್ವಜನಿಕ ನೌಕರನಿಗೆ ಆತನ ಕರ್ತವ್ಯವನ್ನು ಅನುಚಿತವಾಗಿ ನಿರ್ವಹಿಸಲು ಪ್ರೇರೇಪಿಸುವುದು ಅಥವಾ ಆ ರೀತಿ ಅನುಚಿತವಾಗಿ ಕರ್ತವ್ಯ ನಿರ್ವಹಿಸಿದರೆ ಅಂತಹ ಸಾರ್ವಜನಿಕ ನೌಕರನಿಗೆ ಪ್ರತಿಫಲನೀಡುವ ಉದ್ದೇಶ ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ವಿವಿಧ ವಿಷಯಗಳ ಕುರಿತು ತಿಳಿಸಿದರು.

ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ಕರ್ನಾಟಕ ಲೋಕಾಯುಕ್ತ ಸಂಪನ್ಮೂಲ ಅಧಿಕಾರಿ ಪ್ರಕಾಶ ನಾಡಗೇರ, ಲೋಕಾಯುಕ್ತ ಉಪನಿಬಂಧಕ ಅಮರನಾರಾಯಣ ಕೆ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಕಿರಣ ಪಿ.ಎಂ.ಪಾಟೀಲ, ಗದಗ ಪೊಲೀಸ ಅಧೀಕ್ಷಕ ಸತೀಶ ಚಿಟಗುಬ್ಬಿ, ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ರಾಚಪ್ಪ ತಾಳಿಕೋಟೆ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ ಇದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ