"12ನೇ ಶತಮಾನದಲ್ಲಿ ಜಗತ್ತಿನ ಮೊದಲ ಸಂಸತ್ತು ''ಅನುಭವ ಮಂಟಪ'' ಸ್ಥಾಪಿಸುವ ಮೂಲಕ ಬಸವಣ್ಣನವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮತ್ತು ಮಹಿಳೆಯರಿಗೂ ಸಮಾನತೆ ನೀಡಿದ್ದರು.
ಅಳ್ಳಾವರ:
ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿಭೇದ, ಲಿಂಗ ತಾರತಮ್ಯ, ಮೂಢನಂಬಿಕೆ ಹಾಗೂ ಧಾರ್ಮಿಕ ಕಟ್ಟುಪಾಡುಗಳ ವಿರುದ್ಧ ಹೋರಾಡಿ ಮನುಕುಲಕ್ಕೆ ಸಮಾನತೆ ನೀಡಿದ ಬಸವಣ್ಣನವರನ್ನು ''''ಕೊಲೆಗಡುಕ'''' ಎಂದು ಮತ್ತು ಲಿಂಗಾಯತರನ್ನು ''''ಲಿಂಗ ಹಂತಕರು'''' ಎಂದು ಅವಮಾನಿಸಿರುವ ರವಿ ಹಂಜ್ನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬಸವಣ್ಣನವರ ಅನುಯಾಯಿಗಳು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿನ ಬಸ್ ನಿಲ್ದಾಣ ಸಮೀಪದ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಮಾಜದ ಮುಖಂಡರು, "12ನೇ ಶತಮಾನದಲ್ಲಿ ಜಗತ್ತಿನ ಮೊದಲ ಸಂಸತ್ತು ''''ಅನುಭವ ಮಂಟಪ'''' ಸ್ಥಾಪಿಸುವ ಮೂಲಕ ಬಸವಣ್ಣನವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮತ್ತು ಮಹಿಳೆಯರಿಗೂ ಸಮಾನತೆ ನೀಡಿದ್ದರು. ಯಾವುದೇ ಭೇದಭಾವವಿಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಇತಿಹಾಸವನ್ನು ತಿರುಚಿ, ಶರಣರಿಗೆ, ಲಿಂಗಾಯತ ಸಮಾಜಕ್ಕೆ ಹಾಗೂ ಇಡೀ ಮನುಕುಲಕ್ಕೆ ಅಪಮಾನ ಮಾಡಿರುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ " ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಣರ ವಚನಗಳ ವಿರುದ್ಧ ಅಪಪ್ರಚಾರ ಮಾಡಿ, ಕೋಮು ಪ್ರಚೋದನೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಇಂತಹ ಕೀಳು ಮನೋಭಾವದ ವ್ಯಕ್ತಿಗಳು ಸಮಾಜಕ್ಕೆ ಕಂಟಕವಾಗಿದ್ದಾರೆ. ಸರ್ಕಾರ ಇವರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಅಂಗವಾಗಿ ತಹಶೀಲ್ದಾರ್ ಕಚೇರಿ ಎದುರಿನ ಅಳ್ನಾವರ-ಹಳಿಯಾಳ ರಸ್ತೆಯಲ್ಲಿ ರವಿ ಹಂಜ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇಂತಹ ಘಟನೆಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಹಿಡಕಲ್ನ ಅಡವಿ ಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎಸ್.ಬಿ. ಪಾಟೀಲ (ಕಾಪೋಲಿ), ಎಸ್.ಜಿ. ಜಕಾತಿ, ರಾಜು ಬೆಂಡಿಗೇರಿ, ಉಮೇಶ ಬೂಮಣ್ಣವರ, ಮಲ್ಲಪ್ಪ ಗಾಣಿಗೇರ, ಲಿಂಗರಾಜ ಮೂಲಿಮನಿ, ಸೋಮಶೇಖರ ಅಂಬಡಗಟ್ಟಿ, ಸುಮಂಗಲಾ ಸೊಪ್ಪಿ, ಪೂರ್ಣಿಮಾ ಮುತ್ನಾಳ, ನಾಗರಾಜ ಬುಡರಕಟ್ಟಿ, ಬಸವರಾಜ ಗೊಡಂಬಿ, ವಿಶ್ವಂಭರ ಬನಸಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಅಳ್ನಾವರದ ಪ್ರಭಾರಿ ತಹಶೀಲ್ದಾರ್ ಅಶ್ವಿನಿ ಚಡಚಣ ಅವರು ಮನವಿ ಸ್ವೀಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.