ರಾಜ್ಯದ 10 ಜಿಲ್ಲೆಗಳ ತಂಡಗಳು ಇದರಲ್ಲಿ ಭಾಗವಹಿಸಲಿವೆ ಎಂದರು. ಪ್ರತಿದಿನ ಸಂಜೆ 4.30ರಿಂದ ಪಂದ್ಯಗಳು ಆರಂಭವಾಗಲಿದ್ದು, ರಾತ್ರಿ 8.30ಕ್ಕೆ ಔಪಚಾರಿಕ ಉದ್ಘಾಟನಾ ಸಮಾರಂಭ ನಡೆಯಲಿದೆ.
ಭಟ್ಕಳ: ಇಲ್ಲಿಯ ಸಾಂಪ್ರದಾಯಿಕ ಕಬಡ್ಡಿ ಕ್ರೀಡಾ ಸಂಸ್ಕೃತಿಗೆ ಹೊಸ ಚೈತನ್ಯ ನೀಡುವುದರ ಜತೆಗೆ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಆಟಗಾರರಿಗೆ ಪ್ರೊ ಕಬಡ್ಡಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ನ. 27ರಿಂದ 29ರ ವರೆಗೆ ಮೂರು ದಿನಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಗಂಡಬೇರುಂಡ ಟ್ರೋಫಿ- 2026ರ ಸಂಚಾಲಕ ಹಾಗೂ ಮಾಜಿ ಕಬಡ್ಡಿ ಆಟಗಾರ ಇನಾಯತುಲ್ಲಾ ಶಾಬಂದ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಗಂಡಭೇರುಂಡ ಸಮಿತಿ ಆಶ್ರಯದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಅವರ ಸಹಕಾರದೊಂದಿಗೆ ‘ಬೀನಾ ವೈದ್ಯ ಪ್ರೆಸೆಂಟ್ಸ್ ಗಂಡಭೇರುಂಡ ಟ್ರೋಫಿ’ ಪಂದ್ಯಾವಳಿ ನಡೆಯಲಿದೆ. ರಾಜ್ಯದ 10 ಜಿಲ್ಲೆಗಳ ತಂಡಗಳು ಇದರಲ್ಲಿ ಭಾಗವಹಿಸಲಿವೆ ಎಂದರು. ಪ್ರತಿದಿನ ಸಂಜೆ 4.30ರಿಂದ ಪಂದ್ಯಗಳು ಆರಂಭವಾಗಲಿದ್ದು, ರಾತ್ರಿ 8.30ಕ್ಕೆ ಔಪಚಾರಿಕ ಉದ್ಘಾಟನಾ ಸಮಾರಂಭ ನಡೆಯಲಿದೆ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ನಾಯ್ಕ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾವಂತ ಆಟಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರನ್ನು ಪ್ರೊ ಕಬಡ್ಡಿ ಹಾಗೂ ರಾಷ್ಟ್ರೀಯ ತಂಡಗಳಿಗೆ ಪರಿಚಯಿಸುವುದು ಪಂದ್ಯಾವಳಿಯ ಪ್ರಮುಖ ಆಶಯವಾಗಿದೆ ಎಂದರು.
ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ್, ಬಿ.ಸಿ. ಸುರೇಶ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಚಲುವರಾಜ್ ಕೆ., ಕಾರ್ಯದರ್ಶಿ ಗೌರೀಷ್ ಹಾಗೂ ಶನ್ಮುಗಮ್ ಮುನಿರಾಜು ಅವರು ಪಂದ್ಯಾವಳಿಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಸತೀಶ್ ಸೈಲ್, ಆರ್.ವಿ. ದೇಶಪಾಂಡೆ, ದಿನಕರ ಶೆಟ್ಟಿ, ಮೊಹಿದ್ದೀನ್ ಬಾವಾ, ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ, ಜಿಲ್ಲಾಧಿಕಾರಿಗಳು ಹಾಗೂ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಝೀಝುರ್ ರಹ್ಮಾನ್ ರುಕ್ನುದ್ದೀನ್ ನದ್ವಿ ಸೇರಿದಂತೆ ಜಿಲ್ಲೆಯ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ತಾಲೂಕು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರವೂಫ್ ನಾಯ್ತೆ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಝೀಝುರ್ ರಹ್ಮಾನ್ ರುಕ್ನುದ್ದೀನ್ ನದ್ವಿ, ಪ್ರಕಾಶ್ ನಾಯ್ಕ, ಆದಂ ಪಣಂಬೂರು ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಸ್ಥಳೀಯ ಕಬಡ್ಡಿ ಆಟಗಾರರು ಉಪಸ್ಥಿತರಿದ್ದರು.