ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ೩೫ ವಾರ್ಡ್‌ಗಳಿದ್ದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬೀದಿದೀಪಗಳನ್ನು ನಗರಸಭೆಯಿಂದ ವಿವಿಧ ಯೋಜನೆಗಳಡಿ ಅಳವಡಿಸಲಾಗಿದೆ. ಅದರ ನಿರ್ವಹಣೆಗೆ ಆಯಾ ಬಡಾವಣೆಯ ಗುತ್ತಿಗೆದಾರನಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಸಿಬ್ಬಂದಿಯ ಉದಾಸೀನದಿಂದ ನಗರದ ಹಲವು ರಸ್ತೆಗಳಲ್ಲಿ ಬೀದಿದೀಪ ಹಗಲಲ್ಲೂ ಬೆಳಗುತ್ತಿವೆ.
ನಗರದ ಗೌರಿಪೇಟೆ, ಅಂತರಗಂಗೆ ರಸ್ತೆ, ಕೀಲುಕೋಟೆ, ಜಯನಗರ, ಪಿ.ಸಿ.ಬಡಾವಣೆ, ಮುನೇಶ್ವರ ನಗರ, ಕಾರಂಜಿಕಟ್ಟೆ, ಗಾಂಧಿನಗರ, ರಹಮತ್‌ನಗರ, ಶಹಿನ್‌ಷಾ ನಗರ ಹೀಗೆ ಹಲವು ಕಡೆ ಹಗಲಲ್ಲೂ ಬೀದಿ ದೀಪಗಳು ಉರಿಯುತ್ತಿವೆ. ಅಧಿಕಾರಿಗಳು ಇದನ್ನು ಕಂಡರೂ ಕಾಣದಂತೆ ಮುನ್ನಡೆಯುತ್ತಾರೆ.ನಗರ ವ್ಯಾಪ್ತಿಯಲ್ಲಿನ ಕೆಲವು ಬಡಾವಣೆಗಳಲ್ಲಿ ಆಗಾಗ್ಗೆ ಬೀದಿದೀಪಗಳು ಕೈಕೊಡುತ್ತವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ದೂರು ನೀಡಿದರೂ ಶೀಘ್ರ ಸರಿಪಡಿಸುವ ಕೆಲಸ ಮಾಡುವುದಿಲ್ಲ. ಮತ್ತೊಂದೆಡೆ ಹಗಲಿನಲ್ಲಿ ಉರಿಯುವ ದೀಪಗಳನ್ನು ಬಂದ್ ಮಾಡುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬೀದಿದೀಪಗಳ ಸಮಸ್ಯೆ ಕಂಡುಬಂದರೆ ದೂರು ನೀಡಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಆ ಸಿಬ್ಬಂದಿಯ ದೂರವಾಣಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ. ಸಾರ್ವಜನಿಕರ ದೂರನ್ನು ನಗರಸಭೆ ಸಿಬ್ಬಂದಿ ದಾಖಲಿಸಿಕೊಂಡು ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರನಿಗೆ ಮಾಹಿತಿ ನೀಡಿ ಸರಿಪಡಿಸಬೇಕು. ಆದರೆ, ಅಧಿಕಾರಿಗಳಿಗೆ ದೂರು ಹೋದರೂ ನೋಂದಾಯಿಸಿಕೊಳ್ಳದೇ ಉದಾಸೀನ ತೋರುತ್ತಾರೆ. ನಿರ್ವಹಣೆ ಹೊಣೆ ಹೊತ್ತವರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ಬೀದಿದೀಪ ನಂದಿಸಲು ಸ್ವೀಚ್ ಅಳವಡಿಸಿರುವುದಿಲ್ಲ, ವೈರ್‌ಗಳನ್ನು ನೇತಾಕಿರುತ್ತಾರೆ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.