ಕುಮಟಾದಲ್ಲಿ ಬೀದಿದೀಪ ಅಸಮರ್ಪಕ ನಿರ್ವಹಣೆ; ಆಕ್ಷೇಪ

KannadaprabhaNewsNetwork |  
Published : Jun 12, 2025, 01:34 AM IST
ಫೋಟೋ : ೧೧ಕೆಎಂಟಿ_ಜೆಯುಎನ್_ಕೆಪಿ೨ : ಪುರಸಭೆ ಸಾಮಾನ್ಯ ಸಭೆ | Kannada Prabha

ಸಾರಾಂಶ

ವಿದ್ಯುತ್ ಬೀದಿ ದೀಪಗಳು ಹಗಲಿನಲ್ಲೂ ಉರಿಯುತ್ತಿದ್ದರೂ ನೋಡುವವರಿಲ್ಲ.

ಕುಮಟಾ: ಪಟ್ಟಣದ ಬೀದಿದೀಪಗಳ ನಿರ್ವಹಣೆ ವಿಚಾರ ಸದಸ್ಯರ ತೀವ್ರ ಆಕ್ಷೇಪಕ್ಕೆ ಗುರಿಯಾದ ಪ್ರಸಂಗ ಪಟ್ಟಣದ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸದಸ್ಯ ಎಂ.ಟಿ. ನಾಯ್ಕ ಮಾತನಾಡಿ, ಹೊಸ ವ್ಯವಸ್ಥೆಯಲ್ಲಿ ಕಳೆದ ವರ್ಷ ಕೈಗೊಂಡಿದ್ದ ಬೀದಿದೀಪ ಅಳವಡಿಕೆಯಲ್ಲಿ ಬಹುತೇಕ ಎಲ್ಲ ವಾರ್ಡುಗಳಲ್ಲಿ ಹೊಸ ವಿದ್ಯುತ್ ದೀಪ ಅಳವಡಿಕೆ ಮಾಡಿಲ್ಲ. ವಿದ್ಯುತ್ ಬೀದಿ ದೀಪಗಳು ಹಗಲಿನಲ್ಲೂ ಉರಿಯುತ್ತಿದ್ದರೂ ನೋಡುವವರಿಲ್ಲ. ದೀಪ ಕೆಟ್ಟರೆ ಹೇಳುವವರು ಕೇಳುವವರು ಇಲ್ಲ. ಬೀದಿದೀಪ ನಿರ್ವಹಣೆಗೆ ಪುರಸಭೆಗೆ ಏನು ಅಧಿಕಾರ ಉಳಿದಿದೆ ಎಂದು ಪ್ರಶ್ನಿಸಿದರು.

ನಾಮನಿರ್ದೇಶಿತ ಸದಸ್ಯ ಕಾಂತರಾಜ ನಾಯ್ಕ ಮಾತನಾಡಿ, ಮೊದಲು ಬೀದಿದೀಪಗಳು ಅಳವಡಿಸಿದ ಕಂಬಗಳಿಗೆ ನಂಬರ್ ಸಹಿತ ಪುರಸಭೆಯಲ್ಲಿ ದಾಖಲೆ ಇರುತ್ತಿತ್ತು. ಮೊದಲಿದ್ದ ಸಂಖ್ಯೆಗೆ ತಕ್ಕಂತೆ ಪುರಸಭೆಯ ಬೇಡಿಕೆಯಷ್ಟು ಕಂಬಗಳಿಗೆ ಬೀದಿದೀಪ ಏಕೆ ಅಳವಡಿಸಿಲ್ಲ. ಬಾಕಿ ಬೀದಿದೀಪ ಅಳವಡಿಕೆ ಯಾವಾಗ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಹಾಜರಿದ್ದ ಬೀದಿದೀಪ ಸಿಎಂಸಿ ಉಸ್ತುವಾರಿ ಬಿರಾದಾರ ಪ್ರತಿಕ್ರಿಯಿಸಿ, ನಮಗೆ ನಗರಾಭಿವೃದ್ಧಿ ಕೋಶದಿಂದ ಮಂಜೂರಾದ ಸಂಖ್ಯೆಗಿಂತ ಹೆಚ್ಚು ಬೀದಿದೀಪ ಅಳವಡಿಸಿದ್ದೇವೆ. ೩೨೯೯ ದೀಪ ಮಂಜೂರಾಗಿದ್ದು ೩೩೦೬ ದೀಪ ಅಳವಡಿಸಿದ್ದೇವೆ. ಉಳಿದ ದೀಪಗಳ ಮಂಜೂರಿ ದೊರೆತ ಕೂಡಲೇ ಬಾಕಿ ದೀಪ ಅಳವಡಿಸುತ್ತೇವೆ ಎಂದರು. ಸದ್ಯ ಮೂರ್ನಾಲ್ಕು ವಾರ್ಡುಗಳಲ್ಲಿ ಮಾತ್ರ ದೀಪ ಕೆಟ್ಟಿರುವ ದೂರು ಇದೆ ಎಂದರು.

ಸದಸ್ಯ ಸಂತೋಷ ನಾಯ್ಕ ಪ್ರತಿಕ್ರಿಯಿಸಿ, ಎಲ್ಲ ವಾರ್ಡುಗಳಲ್ಲಿ ನೂರಾರು ದೀಪಗಳು ಕೆಟ್ಟಿವೆ. ಕಳೆದ ವರ್ಷ ಹೊಸ ದೀಪ ಅಳವಡಿಸುವಾಗ ಎಲ್ಲಿಯೇ ದೀಪ ಕೆಟ್ಟರೂ ನಮಗೆ ಅಟೊಮೆಟಿಕ್ಕಾಗಿ ಮೆಸೇಜ್ ಬರುತ್ತದೆ. ತಕ್ಷಣ ಅಲ್ಲಿ ದುರಸ್ತಿ ಮಾಡುತ್ತೇವೆ. ದೀಪಗಳಿಗೆ ಟೈಮರ್ ಅಳವಡಿಸಿದ್ದೇವೆ. ಹೀಗಾಗಿ ಆನ್-ಆಫ್ ಅಗತ್ಯವಿಲ್ಲ ಎಂದಿದ್ದೀರಿ. ಈಗ ಕೆಲವೆಡೆ ದಿನವಿಡೀ ಸಾಲುಸಾಲು ದೀಪಗಳು ಉರಿಯುತ್ತವೆ. ಕೆಲವೆಡೆ ದೀಪ ಉರಿಯದೇ ಬಹಳ ಕಾಲವಾದರೂ ದುರಸ್ತಿಯಿಲ್ಲ ಎಂದರು.

ಮಳೆಗಾಲದ ಗಟಾರ, ಕಾಲುವೆ ಸ್ವಚ್ಛತೆಗೆ ಟೆಂಡರ್ ಕರೆದಿದ್ದರು. ಎಲ್ಲಯೂ ಕೆಲಸವಾಗಿಲ್ಲ. ಎಲ್ಲಿ ಸ್ವಚ್ಛತೆ ಮಾಡುತ್ತಾರೆ ಎಂಬುದೇ ಸದಸ್ಯರಿಗೆ ತಿಳಿಯುತ್ತಿಲ್ಲ ಎಂದು ಕಾಂತರಾಜ ನಾಯ್ಕ, ಎಂ.ಟಿ.ನಾಯ್ಕ ಇನ್ನಿತರ ಸದಸ್ಯರು ಸ್ವಚ್ಛತಾ ವಿಭಾಗದ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಅಧ್ಯಕ್ಷೆ ಸುಮತಿ ಭಟ್ ಪ್ರತಿಕ್ರಿಯಿಸಿ, ಮಳೆಗಾಲ ಆರಂಭವಾಗಿದ್ದರಿಂದ ಎಲ್ಲೆಲ್ಲಿ ಮಳೆನೀರಿನ ಸಮಸ್ಯೆ ಉಂಟಾಗಿದೆಯೋ ಅಲ್ಲೆಲ್ಲ ಆದ್ಯತೆ ಮೇರೆಗೆ ಕೆಲಸ ಮಾಡಿದ್ದಾರೆ. ಎಲ್ಲ ವಾರ್ಡುಗಳಲ್ಲೂ ಸ್ವಚ್ಛತೆ ಮಾಡಲಾಗುವುದು ಎಂದರು.

ಪುರಸಭೆಯಿಂದ ೮ ಲೋಡ್ ಮಣ್ಣುಭರಣಕ್ಕೆ ₹೯೮ ಸಾವಿರ ಲೆಕ್ಕ ಬರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸಂತೋಷ ನಾಯ್ಕ ಹಾಗೂ ಇತರರು, ಒಂದು ಲೋಡ್ ಮಣ್ಣಿಗೆ ₹೧೨,೨೫೦ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಇದಕ್ಕೆ ಸಂಬಂಧಿಸಿದ ಫೈಲ್ ತರಿಸಿ ಪರಿಶೀಲಿಸುತ್ತೇನೆ ಎಂದರು. ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರು ಅನುಮೋದಿಸಿದ ಕೆಲಸಗಳನ್ನು ಮಾಡಿ ಎಂದು ಸದಸ್ಯ ಕಾಂತರಾಜ ಒತ್ತಾಯಿಸಿದರು.

ಉಳಿದಂತೆ ಸಭೆಯಲ್ಲಿ ಅಂಗಡಿಮಳಿಗೆಗಳ ಹರಾಜು ದರ ಮಂಜೂರಾತಿ, ವಿನ್ಯಾಸ ನಕ್ಷೆಗಳಿಗೆ ಅನುಮೋದನೆ, ಸಿಸಿ ಕ್ಯಾಮೆರಾ ನಿರ್ವಹಣೆ ಮತ್ತು ಸಂಚಾರ ವ್ಯವಸ್ಥೆ ಹಾಗೂ ಮೀನುಗಾರಿಕೆ ಇಲಾಖೆಯವರು ಇತ್ತೀಚೆಗೆ ನಡೆಸಿದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರನ್ನು ಆಮಂತ್ರಣ ಪತ್ರಿಕೆಯಲ್ಲಿ ಕಡೆಗಣಿಸಿ, ಶಿಷ್ಟಾಚಾರ ಉಲ್ಲಂಘಿಸಿದ ವಿಚಾರ. ಸಾಮಾನ್ಯ ಸಭೆಯ ಹಾಲಿನಲ್ಲಿ ಮೈಕ್ ಅಳವಡಿಕೆ ಇನ್ನಿತರ ಸಂಗತಿಗಳು ಚರ್ಚೆಯಾದವು. ಉಪಾಧ್ಯಕ್ಷ ಮಹೇಶ ನಾಯ್ಕ, ಸಭಾನಾಯಕ ಸೂರ್ಯಕಾಂತ ಗೌಡ, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ವ್ಯವಸ್ಥಾಪಕಿ ಅನಿತಾ ಶೆಟ್ಟಿ, ಸದಸ್ಯರು ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''