ಮರ ಆಧಾರಿತ ಕೃಷಿಯಿಂದ ಉತ್ತಮ ಆದಾಯ ಸಾಧ್ಯ

KannadaprabhaNewsNetwork |  
Published : Jun 12, 2025, 01:33 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಆಸಕ್ತ ಕೃಷಿಕರಿಗೆ ಮರ ಆಧಾರಿತ ನೈಸರ್ಗಿಕ ಕೃಷಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜೇನು ಕೃಷಿ, ಗೋವು ಆಧಾರಿತ ಮತ್ತು ಮರ ಆಧಾರಿತ ನೈಸರ್ಗಿಕ ಕೃಷಿಯ ಅಳವಡಿಕೆಯಿಂದ ಉತ್ತಮ ಆರೋಗ್ಯ, ಪರಿಸರ ಮತ್ತು ಸುಸ್ಥಿರ ಆದಾಯ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಆಸಕ್ತ ಕೃಷಿಕರಿಗೆ ಮರ ಆಧಾರಿತ ನೈಸರ್ಗಿಕ ಕೃಷಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ಬೆಳೆ ಇಳುವರಿ ಪಡೆಯುವ ಉದ್ದೇಶದಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ರೈತರ ಬೆಳೆ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದ್ದು ಪರಿಸರ ಮಾಲಿನ್ಯ ಮತ್ತು ಜೀವ ವೈವಿದ್ಯತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದೇವೆ, ಹಾಗಾಗಿ ರೈತ ಬಾಂಧವರು ತರಬೇತಿಯ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಹೇಳಿದರು.

ಪ್ರಗತಿಪರ ಕೃಷಿಕ ಸಿದ್ದವೀರಪ್ಪ ಮಾತನಾಡಿ, ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು ಪರಿಸರ ಸ್ನೇಹಿ ಕೃಷಿ ಮಾಡಬೇಕು ಎಂದು ಹೇಳಿದರು.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಜೀವವೈವಿದ್ಯತೆ ಕಾಪಾಡುವುದು ಮತ್ತು ಜಲಜಾಗೃತಿ ಮೂಡಿಸುವುದು ಅನಿವಾರ್ಯವಾಗಿದ್ದು ಇಂತಹ ತರಬೇತಿಗಳು ಇಂದು ಅತ್ಯವಶ್ಯಕ ಎಂದು ಹೇಳಿದರು.

ಕರ್ನಾಟಕ ವೈಜ್ಞಾನಿಕ ಸಲಹಾ ಸಮಿತಿ ಮಂಡಳಿ ಸದಸ್ಯರು ಹಾಗೂ ವೈಜ್ಞಾನಿಕ ಸಲಹೆಗಾರರಾದ ಡಾ. ಚಂದ್ರಶೇಖರ್ ಬಿರಾದಾರ್ ಮಾತನಾಡಿ, ನಾವು ಮಾಡುವ ಕೃಷಿ ಭೂಮಿಯಲ್ಲಿ ಶೇ.33ರಷ್ಟು ಮರಗಳಿರಬೇಕು. ಆದರೆ ಶೇ.3ಕ್ಕಿಂತ ಕಡಿಮೆ ಮರಗಳಿದ್ದು ವಾತಾವರಣದಲ್ಲಿ ಏರುಪೇರಾಗಿದ್ದು ಸರಿಯಾದ ಪ್ರಮಾಣದಲ್ಲಿ ಮತ್ತು ಸಮಯದಲ್ಲಿ ಮಳೆ ಬರುತ್ತಿಲ್ಲ. ಮರ ಆಧಾರಿತ ನೈಸರ್ಗಿಕ ಕೃಷಿಯಿಂದ ಉತ್ತಮ ಮಳೆ, ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ, ಕಡಿಮೆ ಮಣ್ಣಿನ ಸವಕಳಿ, ಮಿತ್ರ ಹಾಗೂ ಶತ್ರು ಕೀಟಗಳ ಸಮತೋಲನೆ, ತಂಪಾದ ವಾತಾವರಣ, ಕಡಿಮೆ ನೀರಿನ ಆವಿಯಾಗುವಿಕೆ, ಹೆಚ್ಚಿನ ನೀರಿನ ಇಂಗುವಿಕೆ, ವಾತಾವರಣದ ಇಂಗಾಲದ ಪ್ರಮಾಣ ಗಣನೀಯ ಇಳಿಕೆಯಲ್ಲದೆ ಉತ್ತಮ ಪರಿಸರ ಮತ್ತು ಆರೋಗ್ಯ ಪಡೆಯಲು ಸಹಕಾರಿಯಾಗಿದೆ.ನೈಸರ್ಗಿಕ ಕೃಷಿಯಲ್ಲಿ ಮುಖ್ಯವಾಗಿ ಕಡಿಮೆ ಉಳುಮೆ, ಭೂಮಿಯ ಮುಚ್ಚಿಗೆ, ಬಹು ಮಹಡಿ ಬೆಳೆ ಪದ್ದತಿ ಅಳವಡಿಕೆ, ಜೀವಾಮೃತ ಮತ್ತು ಬೀಜಾಮೃತ ಬಳಕೆಯಿಂದ ಸುಸ್ಥಿರ ಇಳುವರಿ ಪಡೆಯಲು ಅನುಕೂಲಕರವಾಗಿದೆ. ರೈತರು ಹೊಲದಲ್ಲೇ ಮನೆ ಮಾಡಿಕೊಂಡು ಕೃಷಿಯಲ್ಲಿ ತೊಡಗುವುದರಿಂದ ಕೃಷಿಯ ಮೇಲ್ವಿಚಾರಣೆ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದರು.

ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಮತ್ತು ಪರಿಸರ ಸಂರಕ್ಷಣಾ ಉಪಾಧ್ಯಕ್ಷ ಓಂಕಾರಪ್ಪ ಸೇರಿದಂತೆ ನೂರಾರು ರೈತರು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ