-ನಂದಗುಡಿ ಹೋಬಳಿಯಲ್ಲಿ ಬರ ಅಧ್ಯಯನ
ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರ ಸ್ಥಿತಿಗತಿಯನ್ನು ಅರಿಯುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ತಾಲೂಕಿನ ನಂದಗುಡಿ ಹೋಬಳಿಯ ನಂದಗುಡಿ, ಹಿಂಡಿಗನಾಳ ಹಾಗೂ ಎನ್.ಹೊಸಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದರು.
ರೈತರ ಹೊಲಗಳಿಗೆ ತೆರಳಿ ಬೆಳೆ ಪರಿಸ್ಥಿತಿ ವೀಕ್ಷಿಸಿದ ಸಚಿವರು, ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಅಹವಾಲುಗಳನ್ನು ಆಲಿಸಿದರು. ಸಕಾಲದಲ್ಲಿ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳು ಸಂಪೂರ್ಣ ಹಿನ್ನಡೆಯಾಗಿದ್ದು, ಬಿತ್ತನೆ ಕಾರ್ಯವೂ ಅನಿಶ್ಚಿತತೆಯಲ್ಲಿದೆ ಎಂದು ರೈತರು ಸಚಿವರ ಗಮನಕ್ಕೆ ತಂದರು.ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಮಳೆ ಕೊರತೆಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ಗಮನದಲ್ಲಿದೆ. ಬೆಳೆ ಬೆಳೆಯಲು ಬೇಕಾದಷ್ಟು ತೇವಾಂಶ ಇಲ್ಲದ ಕಾರಣ ರೈತರು ಬಿತ್ತನೆ ಮಾಡುವುದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಭೂಗರ್ಭಜಲ ಮಟ್ಟ ಕುಸಿದಿರುವುದರಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊರೆಸುತ್ತಿರುವ ಬೋರ್‌ವೆಲ್‌ಗಳೂ ವಿಫಲವಾಗುತ್ತಿವೆ. ಇದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದರು.
ಶಾಶ್ವತ ಪರಿಹಾರಕ್ಕಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಳೆ ಆಧಾರಿತ ಕೃಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ರೂಪಿಸುತ್ತಿದೆ. ಜೊತೆಗೆ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಪ್ರತಿಯೊಬ್ಬ ಅರ್ಹ ರೈತನಿಗೂ ಬೆಳೆ ವಿಮೆ ಸೌಲಭ್ಯ ದೊರೆಯುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬರ ಅಧ್ಯಯನದ ವೇಳೆ ರೈತರು ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಕೊರತೆ, ವಿದ್ಯುತ್ ಪೂರೈಕೆಯ ಅಡಚಣೆ ಹಾಗೂ ಬೋರ್‌ವೆಲ್ ವೈಫಲ್ಯದಂತಹ ಸಮಸ್ಯೆಗಳನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು. ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಬೇಕು ಹಾಗೂ ಸರ್ಕಾರದ ಎಲ್ಲಾ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆಎನ್.ಅನುರಾಧ, ಜಿಪಂ ಸಿಇಒ ಡಾ.ವಾಸಂತಿ ಅಮರ್, ತಹಸೀಲ್ದಾರ್ ಶೀತಲ್ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಾಲೂಕು ಆಡಳಿತದ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಫೋಟೋ: 7 ಹೆಚ್‌ಎಸ್‌ಕೆ 1