ಕನ್ನಡಪ್ರಭ ವಾರ್ತೆ ತಿಪಟೂರು
ರೈತರು ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡರೆ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ತಾಲೂಕಿನ ನೆಲಗೊಂಡನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಉಚಿತ ಬಿತ್ತನೆ ಬೀಜ ವಿತರಣೆ, ಬೀಜೋಪಚಾರ ಆಂದೋಲನ ಮತ್ತು ಪೀಡೆ ನಾಶಕಗಳ ಸಮರ್ಪಕ ಮತ್ತು ಸುರಕ್ಷಿತ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ನೀಡುವ ಸದುದ್ದೇಶದಿಂದ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಆಹಾರ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಗುರಿಯಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ. ಎಂ.ಪಿ ಪವನ್ ಮಾತನಾಡುತ್ತಾ, ತಾಲೂಕಿನಲ್ಲಿ ಎರಡು ನೂರು ಹೆಕ್ಟೆರ್ ಪ್ರದೇಶದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಹೆಸರು ಬೆಳೆಯ ಸಾಲು ಬಿತ್ತನೆ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿದೆ ಎಂದರು. ಕೃಷಿ ವಿಜ್ಙಾನಿಗಳಾದ ಡಾ. ಪದ್ಮನಾಭ್ ಮಾತನಾಡುತ್ತಾ, ಆಧುನಿಕ ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳು, ರೋಗನಾಶಕಗಳ ಬಳಕೆ ಅನಿವಾರ್ಯವಾಗಿದೆ. ಅವುಗಳ ಅಸಮರ್ಪಕ ಬಳಕೆಯಿಂದ ಮನುಷ್ಯ ಹಾಗೂ ಪರಿಸರದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆಗಳಿವೆ. ರೈತರು ಶಿಫಾರಸ್ಸು ಮಾಡಿದ ಪ್ರಮಾಣಕ್ಕೂ ಹೆಚ್ಚಿನ ಪೀಡೆನಾಶಕಗಳನ್ನು ಬಳಸಿದಾಗ ಸಸ್ಯ ಸಂರಕ್ಷಣೆಯ ವೆಚ್ಚ ಅತಿಯಾಗಿ ಬೆಳೆಯಿಂದ ಸಿಗುವ ಆದಾಯ ಕಡಿಮೆಯಾಗುತ್ತದೆ. ಪೀಡೆನಾಶಕಗಳ ಸಮರ್ಪಕ ಮತ್ತು ಸುರಕ್ಷಿತ ಬಳಕೆಯಿಂದ ಈ ಎಲ್ಲಾ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದರು.ಹೊನ್ನವಳ್ಳಿ ಕೃಷಿ ಅಧಿಕಾರಿ ಕಿರಣ್ ಮಾತನಾಡಿ ಬಿತ್ತನೆ ಬೀಜದ ಮೂಲಕ ಶೀಲಿಂದ್ರ, ದುಂಡಾಣು, ವೈರಸ್ಸ್ ಮತ್ತು ಜಂತು ಹುಳುಗಳಿಂದ ಹರಡುವ ರೋಗಗಳಿಂದ ಸಸ್ಯಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಸಾಕಷ್ಟು ನಷ್ಠವನ್ನುಂಟು ಮಾಡುತ್ತವೆ. ಆದ್ದರಿಂದ ಬೆಳೆಗಳಿಗೆ ತಗುಲಬಹುದಾದ ಹಾನಿಯನ್ನು ಪ್ರಾರಂಭದಿಂದಲೇ ತಡೆಗಟ್ಟುವುದು ಸೂಕ್ತ. ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಇಳುವರಿಯನ್ನು ಪಡೆಯುವುದಕ್ಕೆ ಬೀಜ ಬೀತ್ತುವುದಕ್ಕಿಂತ ಮುಂಚೆಯೆ ಬೀಜಗಳಿಗೆ ಬೀಜೋಪಚಾರ ಮಾಡುವುದು ಅತಿ ಮುಖ್ಯ ಎಂದು ಬೀಜೋಪಚಾರದ ಪ್ರಾತ್ಯಕ್ಷಿಕೆಯನ್ನು ರೈತರಿಗೆ ತೋರಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಯೋಗೀಶ್, ಸಾರ್ಥವಳ್ಳಿ ಗ್ರಾ.ಪಂ ಸದಸ್ಯರುಗಳಾದ ಪ್ರಕಾಶ್ ಯಾದವ್, ಶಶಿಧರ್, ಪಿಡಿಓ ಲತಾ, ಕಾರ್ಯದರ್ಶಿ ಸತೀಶ್, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಲೋಹಿತ್‌ಕುಮಾರ್, ಪ್ರಗತಿ ಪರ ರೈತ ವಿಶ್ವನಾಥ್ ಮತ್ತಿತರರಿದ್ದರು.