ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಪ್ರತಿಯೊಬ್ಬರು ಪೌಷ್ಟಿಕ ಆಹಾರ ಪದ್ಧತಿಯನ್ನು ತಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ಹೆಚ್ಚು ಆರೋಗ್ಯವಂತರಾಗುವ ಜೊತೆಗೆ ಕಾಯಿಲೆಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ ಎಂದು ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಸಿಡಿಪಿಒ ಇಂದ್ರ ಅಭಿಪ್ರಾಯಪಟ್ಟರು.ಹೋಬಳಿಯ ಚನ್ನೇನಹಳ್ಳಿ ಗ್ರಾಮದ ಅಂಗನವಾಡಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೋಷಣ್ ಕಾರ್ಯಕ್ರಮದ ಮೂಲಕ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ಪದಾರ್ಥಗಳನ್ನು ಮನೆಗಳಿಗೆ ತಲುಪಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜವಾಬ್ದಾರಿಯುತವಾಗಿ ಮಾಡುತ್ತಿದೆ. ತಾಲೂಕಿನಲ್ಲಿ ಗರ್ಭಿಣಿಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಬರದಂತ ರೀತಿಯಲ್ಲಿ ಇಲಾಖೆ ವತಿಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ತಾಲೂಕಿನ ಅಂಗನವಾಡಿ ಕೇಂದ್ರಗಳ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರತಿ ಫಲಾನುಭವಿಗಳನ್ನು ಗುರುತಿಸಿ ನೀಡಲಾಗುತ್ತಿದೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.ನುಗ್ಗೇಹಳ್ಳಿ ಚೆಸ್ಕಾಂ ವಿದ್ಯುತ್ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಜ್ರ ಕುಮಾರ್ ಮಾತನಾಡಿ, ಸಾವಯವ ಸಿರಿಧಾನ್ಯಗಳನ್ನು ಹಾಗೂ ಮೊಳಕೆ ಕಟ್ಟಿದ ಕಾಳನ್ನು ಗರ್ಭಿಣಿಯರು ಸೇರಿದಂತೆ ಎಲ್ಲರೂ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಪಡೆಯಬಹುದು ಪ್ರತಿಯೊಬ್ಬರೂ ತರಕಾರಿ, ಸೊಪ್ಪು ಸೇರಿದಂತೆ ಪೌಷ್ಟಿಕಾಂಶ ಯುಕ್ತ ಆಹಾರ ಪದ್ಧತಿಗಳನ್ನು ಹೆಚ್ಚಾಗಿ ಸೇವಿಸುವಂತೆ ಸಲಹೆ ನೀಡಿದರು.ಪೋಷಣ್ ಅಭಿಯಾನ ಅಂಗವಾಗಿ ಅಂಗನವಾಡಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ, ಮೊಟ್ಟೆ, ಮೊಳಕೆ ಕಟ್ಟಿದ ಕಾಳು ವಿವಿಧ ರೀತಿಯ ಹಣ್ಣುಗಳು ಸಿಹಿ ಪದಾರ್ಥಗಳನ್ನು ಸಾರ್ವಜನಿಕರ ಗಮನ ಸೆಳೆಯಲು ಪ್ರದರ್ಶಿಸಲಾಯಿತು. ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮತ್ತು ಮಕ್ಕಳಿಗೆ ಅನ್ನಪ್ರಶಾನ ಮಾಡಿಸಲಾಯಿತು. ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರೇಹಳ್ಳಿ ವಲಯ ಮೇಲ್ವಿಚಾರಕಿ ಮಮತಾ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪಾರ್ವತಮ್ಮ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಕಲ್ಪನಾ, ಶಾಲಾ ಮುಖ್ಯಾ ಶಿಕ್ಷಕ ಕುಮಾರಸ್ವಾಮಿ, ಸಹ ಶಿಕ್ಷಕ ಸಿದ್ದೇಗೌಡ, ಯುವ ಜೆಡಿಎಸ್ ಮುಖಂಡ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷ ಧನಂಜಯ್, ಗುಡಿ ಗೌಡ್ರು ಚಿಕ್ಕೇಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿ ರಂಗಸ್ವಾಮಿ, ಹಿರಿಯರಾದ ನಂಜುಂಡೇಗೌಡ, ಮುಖಂಡರಾದ ಡಾಬಾ ಚಂದ್ರಶೇಖರ್, ತಿಮ್ಲಾಪುರ ಗೋವಿಂದ್ ರಾಜ್, ಬೊಮ್ಮೇಗೌಡ, ಅಂಗನವಾಡಿ ಶಿಕ್ಷಕಿ ಲಲಿತಮ್ಮ, ಸೇರಿದಂತೆ ಕಾರೇಹಳ್ಳಿ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯ ಎಲ್ಲಾ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.