ಮಡಿಕೇರಿ: ಸಹಕಾರ ಕ್ಷೇತ್ರವು ವಿಶಾಲವಾಗಿದ್ದು, ಜನಜೀವನದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಹೇಳಿದರು.ನಗರದ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಚರ್ಚಾ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಂದ ದೊರಕುವ ವಿವಿಧ ಸಾಲಗಳು ಜೀವನ ಸುಧಾರಣೆ, ಜೀವನ ಗುಣಮಟ್ಟ ಹೆಚ್ಚಳ, ಶಿಕ್ಷಕಣಕ್ಕೆ ಸಹಕಾರಿಯಾಗಿವೆ ಎಂದರು.
ಸ್ಪರ್ಧೆ: ಇದೇ ಸಂದರ್ಭದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಹಕಾರದ ಬಗ್ಗೆ ಜನಜಾಗೃತಿ ಉಂಟು ಮಾಡುವಲ್ಲಿ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಪಾತ್ರ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜನಜೀವನದ ಸಮಗ್ರ ಅಭಿವೃದ್ಧಿಗೆ ಸಹಕಾರಿ ವ್ಯವಸ್ಥೆ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆ ನಡೆಸಲಾಯಿತು. ಯೂನಿಯನ್ ನಿರ್ದೇಶಕರಾದ ಎಂ.ಟಿ.ಸುಬ್ಬಯ್ಯ, ಪಿ.ಎನ್.ಚಂದ್ರಪ್ರಕಾಶ್, ಎಸ್.ಆರ್.ಸುನಿಲ್ ರಾವ್, ತೀರ್ಪುಗಾರರಾದ ಎಂ.ಎಂ.ಶ್ಯಾಮಲ, ಕೆ.ಐ.ಸಿ.ಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಉಪನ್ಯಾಸಕರಾದ ಮಹದೇವಪ್ಪ, ಸಂಜೀವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ವ್ಯವಸ್ಥಾಪಕಿ ಆರ್.ಮಂಜುಳ, ಬಿ.ಸಿ.ಅರುಣ್ ಕುಮಾರ್ ಇದ್ದರು.ಬಹುಮಾನ ವಿವರ: ಪ್ರಬಂಧ ಸ್ಪರ್ಧೆಯಲ್ಲಿ ಸಿದ್ದಾಪುರದ ಇಕ್ರಾ ಪಬ್ಲಿಕ್ ಸ್ಕೂಲ್‌ನ ಸಿ.ಎನ್.ಶಪ್ನ(ಪ್ರ), ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕೆ.ಕೆ.ಇಂಪ(ದ್ವಿ), ಶಿರಂಗಾಲದ ಕೆ.ಪಿ.ಎಸ್ ಪ್ರೌಢಶಾಲೆಯ ಎಸ್.ವಿ.ಯಶಸ್ಸಿ ತೃತೀಯ ಹಾಗೂ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಕೆ.ಆರ್.ಪ್ರೇಕ್ಷಾ ಪೊನ್ನಮ್ಮ ಅವರು ಸಮಾಧಾನಕರ ಬಹುಮಾನ ಪಡೆದರು.
ಚರ್ಚಾ ಸ್ಪರ್ಧೆಯಲ್ಲಿ ಸೋಮವಾರಪೇಟೆ ಬಿ.ಟಿ.ಸಿ.ಜಿ ಪದವಿ ಪೂರ್ವ ಕಾಲೇಜಿನ ಸಿ.ಎಚ್.ಭೂಮಿಕಾ(ಪ್ರ), ಕಳತ್ಮಾಡಿನ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಭುವನ ಪೂವಯ್ಯ(ದ್ವಿ), ಪೊನ್ನಂಪೇಟೆ ಸಿ.ಐ.ಪದವಿ ಪೂರ್ವ ಕಾಲೇಜಿನ ಎ.ಎಸ್.ತ್ರಿಷಾ ತೃತೀಯ ಹಾಗೂ ಮಡಿಕೇರಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಎ.ಸಿ.ಅಶ್ವಿತ ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು.