ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

KannadaprabhaNewsNetwork |  
Published : Sep 28, 2024, 01:15 AM IST
ಪೋಟೊ- ೨೬ ಎಸ್.ಎಚ್.ಟಿ. ೩ಕೆ-ಶಿರಹಟ್ಟಿ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ೧೭ ವರ್ಷ ವಯೋಮಿತಿಯ ಕಬಡ್ಡಿ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಜೀವನದಲ್ಲಿಯ ಉದ್ದೇಶ, ಗುರಿ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ

ಶಿರಹಟ್ಟಿ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುವುದಲ್ಲದೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಛಬ್ಬಿ ಸರ್ಕಾರಿ ಪ್ರೌಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪಣ್ಣ ಲಮಾಣಿ ಹೇಳಿದರು.

ಶಿರಹಟ್ಟಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ೧೭ ವರ್ಷ ವಯೋಮಿತಿಯ ಕಬಡ್ಡಿಯಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಯೋಗ ಮತ್ತು ಕ್ರೀಡೆಯಿಂದ ಜೀವನದಲ್ಲಿ ಸದೃಢ ವ್ಯಕ್ತಿಗಳಾಗಿ ಬೆಳೆಯಬಹುದು. ಆಟೋಟಗಳಿಂದ ಉತ್ಸಾಹಿಯಾಗಿರಬಹುದು ಎಂದರು.

ಜೀವನದಲ್ಲಿಯ ಉದ್ದೇಶ, ಗುರಿ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯ ವೃದ್ಧಿಸಿಕೊಳ್ಳಲು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಪಾಲ್ಗೋಳ್ಳಬೇಕು. ಕ್ರೀಡೆ ಕೇವಲ ಮನೋರಂಜನೆ ಮಾತ್ರವಲ್ಲ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.

ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಎಂಬ ದಾರ್ಶನಿಕರ ಅನುಭವ ವಾಣಿಯಂತೆ ಮನುಷ್ಯನ ದೇಹ ಮತ್ತು ಮನಸ್ಸುಗಳು ದೃಢತೆ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆ ರೂಢಿಸಿಕೊಳ್ಳುವುದು ಉತ್ತಮ. ಇದರಿಂದ ಪ್ರತಿಯೊಬ್ಬರೂ ಒಳ್ಳೆಯ ಆರೋಗ್ಯ ಹೊಂದಬಹುದು ಎಂದು ಅಭಿಪ್ರಾಯಪಟ್ಟರು.

ಶಾಲೆಯ ಮುಖ್ಯೋಪಾಧ್ಯಾಯ ವೈ.ಪಿ. ಜಿಗಳೂರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಪ್ರಪುಲ್ಲವಾಗಿರಲು ಸಾಧ್ಯವಾಗುತ್ತದೆ. ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ವೃದ್ಧಿ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.

ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅವಶ್ಯಕ. ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು. ಇದರಿಂದ ನಮ್ಮ ಜೀವನ ಶೈಲಿ ಬದಲಾಗುತ್ತದೆ. ಕಬಡ್ಡಿ ಆರೋಗ್ಯಕರ ಕ್ರೀಡೆಯಾಗಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಎಸ್‌ಡಿಎಂಸಿ ಸರ್ವ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗ ವಿಜೇತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ