ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಇಮ್ರಾನ್‌ ಎಲಿಗಾರ ನೇಮಕ

KannadaprabhaNewsNetwork |  
Published : Jul 10, 2025, 01:46 AM IST
ಇಮ್ರಾನ್‌ ಎಲಿಗಾರ | Kannada Prabha

ಸಾರಾಂಶ

ಅಲ್ಪಸಂಖ್ಯಾತರಿಗೆ ಈ ಸಲ ವಿರೋಧ ಪಕ್ಷದ ನಾಯಕತ್ವದ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿತ್ತು. ಇದಕ್ಕೆ ಮನ್ನಣೆ ನೀಡಿರುವ ಕಾಂಗ್ರೆಸ್‌ ಇಮ್ರಾನ್‌ ಎಲಿಗಾರ ಅವರನ್ನು ವಿಪಕ್ಷ ಸ್ಥಾನದ ನಾಯಕರನ್ನಾಗಿ ನೇಮಿಸಿದೆ. ಪೂರ್ವ ಕ್ಷೇತ್ರದ ಬಲ್ಕಿಸಬಾನು ಸೇರಿದಂತೆ ಹಲವರು ವಿರೋಧ ಪಕ್ಷದ ನಾಯಕತ್ವಕ್ಕೆ ಪೈಪೋಟಿ ನಡೆಸಿದ್ದರು.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರನ್ನಾಗಿ 33ನೆಯ ವಾರ್ಡ್‌ನ ಸದಸ್ಯ ಇಮ್ರಾನ್‌ ಹುಸೇನ ಎಲಿಗಾರ ಅವರನ್ನು ಕಾಂಗ್ರೆಸ್‌ ಪಕ್ಷವು ನೇಮಕ ಮಾಡಿದೆ.

ಈ ಮೂಲಕ ಈ ಸಲ ವಿಪಕ್ಷ ನಾಯಕನ ಸ್ಥಾನ ಪಶ್ಚಿಮ ಕ್ಷೇತ್ರ, ಜತೆಗೆ ಅಲ್ಪಸಂಖ್ಯಾತರಿಗೆ ಮೊದಲ ಬಾರಿಗೆ ದೊರೆತಂತಾಗಿದೆ. ಇದೀಗ ಸಭಾನಾಯಕರನ್ನಾಗಿ ಆಡಳಿತ ಪಕ್ಷವಾಗಿರುವ ಬಿಜೆಪಿ ಯಾರನ್ನು ಮಾಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಮೇಯರ್‌ ಆಗಿ ಬಿಜೆಪಿಯ ಜ್ಯೋತಿ ಪಾಟೀಲ ಹಾಗೂ ಉಪಮೇಯರ್‌ ಆಗಿ ಸಂತೋಷ ಚವ್ಹಾಣ ಅವರಾಗಿದ್ದಾರೆ. ಮೂರು ವರ್ಷಗಳಲ್ಲಿ ವಿಪಕ್ಷ ನಾಯಕ ಸ್ಥಾನ ದೊರಾಜ ಮಣಿಕುಂಟ್ಲಾ (ಪೂರ್ವ ಕ್ಷೇತ್ರ), ಸುವರ್ಣ ಕಲಕುಂಟ್ಲಾ (ಸೆಂಟ್ರಲ್) ಹಾಗೂ ರಾಜಶೇಖರ ಕಮತಿ (ಧಾರವಾಡ) ಅವರಿಗೆ ದೊರೆತಿತ್ತು. ಹೀಗಾಗಿ ಸಹಜವಾಗಿ ಪಶ್ಚಿಮ ಕ್ಷೇತ್ರಕ್ಕೆ ವಿಪಕ್ಷ ನಾಯಕನ ಸ್ಥಾನ ನೀಡಿ ಎಂಬ ಬೇಡಿಕೆ ಇತ್ತು. ಜತೆಗೆ ಅಲ್ಪಸಂಖ್ಯಾತರಿಗೆ ಈ ಸಲ ವಿರೋಧ ಪಕ್ಷದ ನಾಯಕತ್ವದ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿತ್ತು.

ಇದಕ್ಕೆ ಮನ್ನಣೆ ನೀಡಿರುವ ಕಾಂಗ್ರೆಸ್‌ ಇಮ್ರಾನ್‌ ಎಲಿಗಾರ ಅವರನ್ನು ವಿಪಕ್ಷ ಸ್ಥಾನದ ನಾಯಕರನ್ನಾಗಿ ನೇಮಿಸಿದೆ. ಪೂರ್ವ ಕ್ಷೇತ್ರದ ಬಲ್ಕಿಸಬಾನು ಸೇರಿದಂತೆ ಹಲವರು ವಿರೋಧ ಪಕ್ಷದ ನಾಯಕತ್ವಕ್ಕೆ ಪೈಪೋಟಿ ನಡೆಸಿದ್ದರು.

ಇದೀಗ ಮೇಯರ್‌ ಹಾಗೂ ವಿರೋಧ ಪಕ್ಷದ ಸ್ಥಾನಗಳೆರಡು ಪಶ್ಚಿಮ ಕ್ಷೇತ್ರದ ಪಾಲಾದಂತಾಗಿವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ಇಮ್ರಾನ್‌ ಎಲಿಗಾರ ಅವರನ್ನು ನೇಮಕ ಮಾಡಿದ ಪತ್ರವನ್ನು ನೀಡಿದರು. ಈ ವೇಳೆ ಮುಖಂಡ ನವೀದ ಮುಲ್ಲಾ ಸೇರಿದಂತೆ ಇತರರು ಇದ್ದರು.

ಸಭಾ ನಾಯಕ ಯಾರು?: ವಿರೋಧ ಪಕ್ಷದ ನಾಯಕತ್ವದ ಸ್ಥಾನವನ್ನು ಕಾಂಗ್ರೆಸ್‌ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದೀಗ ಬಿಜೆಪಿಯಲ್ಲಿ ಇವರಿಗೆ ಠಕ್ಕರ್‌ ಕೊಡುವಂತಹ ಯಾವ ಸದಸ್ಯರಿಗೆ ಸಭಾನಾಯಕ ಸ್ಥಾನವನ್ನು ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಮಹಿಳಾ ಮೇಯರ್‌ ಆಗಿರುವ ಕಾರಣ ಮಹಿಳಾ ಸದಸ್ಯೆಗೇ ಸಭಾನಾಯಕ ಸ್ಥಾನ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಹೀಗಾಗಿ ರಾಧಾಬಾಯಿ ಸಫಾರೆ ಪೈಪೋಟಿ ನಡೆಸುತ್ತಿದ್ದರೆ, ಮೇಯರ್‌ ಮಹಿಳೆಯೇ ಇದ್ದಾರೆ. ಆದಕಾರಣ ಪುರುಷರಿಗೆ ನೀಡಿ ಎಂಬ ಬೇಡಿಕೆಯೂ ಕೇಳಿ ಬಂದಿದೆ. ಈರೇಶ ಅಂಚಟಗೇರಿ, ಶಿವು ಮೆಣಸಿನಕಾಯಿ, ವಿಜಯಾನಂದ ಶೆಟ್ಟಿ ಸಭಾನಾಯಕ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಎಲ್ಲರೂ ಅನುಭವಸ್ಥರೇ ಆಗಿರುವ ಕಾರಣ ಯಾರನ್ನು ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಯೋಚಿಸಿ ಬಿಜೆಪಿ ಸಭಾನಾಯಕರನ್ನಾಗಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

PREV