ಕನ್ನಡಪ್ರಭ ವಾರ್ತೆ ಮದ್ದೂರು
ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಿ 66 ವರ್ಷದ ಇತಿಹಾಸದಲ್ಲೇ ಇದುವರೆಗೂ ಯಾವುದೇ ಒಂದು ಪಕ್ಷದ ಬೆಂಬಲಿತರು 9 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಈ ಬಾರಿ ಸಾಧನೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ಹಾಗೂ ಭಾರತಿನಗರ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಜಿಲ್ಲಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರಿ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 9 ಅವಿರೋಧ ಆಯ್ಕೆ ಸೇರಿ ಒಟ್ಟು 11 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಜೋಗಿಗೌಡರ ಪಾತ್ರ ಅಪಾರವಾಗಿದೆ. ಚುನಾವಣೆಗೆ ಒಂದು ವರ್ಷ ಇರುವಾಗಲೇ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಇದಕ್ಕೆ ನಾನು ಸೇರಿದಂತೆ ಶಾಸಕರು, ಮುಖಂಡರು, ಸಹಕಾರಿಗಳು ಬೆಂಬಲ ನೀಡಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಿಗಮ ಮಂಡಳಿ, ಆಯೋಗಗಳಿಗೆ ಆಯ್ಕೆಯಾಗಿ ಜಿಲ್ಲೆಯಲ್ಲಿ 11 ಮಂದಿ ಸರ್ಕಾರಿ ಕಾರಿನಲ್ಲಿ ಓಡಾಟ ಮಾಡುತ್ತಿದ್ದಾರೆ. ಇನ್ನೂ 500 ರಿಂದ 1000 ಸಾವಿರ ಮಂದಿ ಹುದ್ದೆಯ ಆಕಾಂಕ್ಷಿತರಿದ್ದಾರೆ. ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಒಂದೇ ಸಲ ಎಲ್ಲವನ್ನು ಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ತಾಳ್ಮೆ ವಹಿಸಬೇಕು ಎಂದರು.
ಉತ್ತಮ ಕೆಲಸ ಮಾಡಿದರೂ ನನ್ನ ಪರ ಇರುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿಲ್ಲ. ಇದು 1994ರಿಂದಲೂ ನನಗೆ ರಾಜಕೀಯ ಅನುಭವವಾಗಿದೆ. ಯಾರಿಗೂ ಹಣ, ಆಸ್ತಿ ಹಾಗೂ ಅಧಿಕಾರದಿಂದ ತೃಪ್ತಿ ಸಿಗಲ್ಲ. ಇರುವುದರಲ್ಲಿ ತೃಪ್ತಿ ಪಟ್ಟರೆ ನೆಮ್ಮದಿ ಸಾಧ್ಯ. ನಿಮ್ಮ ದುಡಿಮೆ, ತಾಳ್ಮೆಯ ಮನಸ್ಸು, ಪ್ರಯತ್ನದಿಂದ ಯಶಸ್ಸು ಪಡೆಯಬಹುದು. ನೀವಿಲ್ಲದೆ ಪಕ್ಷವಿಲ್ಲ. ನಮಗೆ ರಾಜಕೀಯದಲ್ಲಿ ಅಸ್ತಿತ್ವ ಪಡೆಯಲು ಸಾಧ್ಯವಿಲ್ಲ ಎಂದು ಮುಖಂಡರು, ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಶಾಸಕ ಕೆ.ಎಂ.ಉದಯ್ ಮಾತನಾಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಯುವಕರೇ ಹೆಚ್ಚಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯ ಶಕ್ತಿ ಬಂದಂತಾಗಿದೆ. ಸಹಕಾರ ಕ್ಷೇತ್ರ ಚುನಾವಣೆಗಳಲ್ಲಿ ಸ್ಪರ್ಧಿಸಲು ಕೆಲವರಿಗೆ ಅವಕಾಶ ಸಿಗದಿರಬಹುದು. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ನಿಷ್ಠಾವಂತರಿಗೆ ಸ್ಪರ್ಧಿಸಲು ಆದ್ಯತೆ ಮೇರೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಚುನಾವಣೆಗಳಲ್ಲಿ ಕೆಲವರಿಗೆ ಅವಕಾಶ ಸಿಗದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ವಿಪಕ್ಷಗಳು ಅಪಪ್ರಚಾರ ನಡೆಸುವ ಮೂಲಕ ನಮ್ಮ ಗುಂಪನ್ನು ಒಡೆಯುವ ಕೆಲಸ ಮಾಡುತ್ತಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.ನಾನು ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಜನರ ಆಹವಾಲು ಆಲಿಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಸಹಕಾರಿ ಕ್ಷೇತ್ರದಿಂದ ಆಯ್ಕೆಯಾದ ಕೆ.ಸಿ.ಜೋಗಿಗೌಡ, ಸಿ. ಚೆಲುವರಾಜು, ಪಿ.ಸಂದರ್ಶ, ಸಚಿನ್ ಚೆಲುವರಾಯಸ್ವಾಮಿ, ಅಶೋಕ್, ದಿನೇಶ್, ಅಂಬರೀಶ್, ವಿಜಯೇಂದ್ರ ಮೂರ್ತಿ, ಗಿರೀಶ, ಸತೀಶ್ ಹಾಗೂ ಮಂಡ್ಯ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಸ್. ಸತ್ಯಾನಂದ ಅವರುಗಳನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಉಪಾಧ್ಯಕ್ಷ ಎ.ರಾಮಕೃಷ್ಣ, ಕಾರ್ಯಾಧ್ಯಕ್ಷ ಚಿದಂಬರ್, ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜು, ಭಾರತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷ ಶುಭದಾಯಿನಿ, ತಾಲೂಕ ಅಧ್ಯಕ್ಷೆ ಮಮತಾ ಶಂಕರೇಗೌಡ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ತಾಲೂಕು ಅಧ್ಯಕ್ಷ ಅಶ್ವಿನ್, ನಗರಸಭೆ ಮಾಜಿ ಅಧ್ಯಕ್ಷ ಕೋಕಿಲ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.ಅನುದಾನ ಬಿಡುಗಡೆಗೆ ಕೇಂದ್ರದಿಂದ ಅಸಹಕಾರ ಧೋರಣೆ: ದಿನೇಶ್ ಗೂಳಿಗೌಡ
ಮದ್ದೂರು:ನಬಾರ್ಡ್ ಮೂಲಕ ರೈತರಿಗೆ ಸಾಲ ವಿತರಣೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದೇ ಅಸಹಕಾರ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಗಂಭೀರ ಮಾಡಿದರು.
ಪಟ್ಟಣದ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ಸರ್ಕಾರದ ವಿರುದ್ಧ ಪ್ರತಿ ಹಂತದಲ್ಲೂ ಮಲತಾಯಿ ಧೋರಣೆ ತಳೆಯುತ್ತಿದೆ. ಕೇಂದ್ರದಿಂದ ಬರುವ ಪ್ರತಿಯೊಂದು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಡ್ಡಗಾಲು ಹಾಕುವ ಮೂಲಕ ಜನರಲ್ಲಿ ತಪ್ಪು ಸಂದೇಶ ಬರುವಂತೆ ನಡೆದುಕೊಳ್ಳುತ್ತಿದೆ ಎಂದು ದೂರಿದರು.ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸಲು ನಬಾರ್ಡ್ ಮೂಲಕ 9570 ಕೋಟಿ ರು, ಸಾಲ ನೀಡುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದು, ಕೇವಲ 30ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.