ಪ್ರಜಾಪ್ರಭುತ್ವದಲ್ಲಿ ಮತದಾನವೇ ನಾಯಕನ ಆಯ್ಕೆಯ ಶಕ್ತಿ: ಜುಬಿನ್ ಮೊಹಾಪಾತ್ರ

KannadaprabhaNewsNetwork | Published : Jan 26, 2025 1:35 AM

ಸಾರಾಂಶ

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ರಾಷ್ಟ್ರೀಯ ಚುನಾವಣಾ ಆಯೋಗದ ವತಿಯಿಂದ ಶನಿವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ೧೫ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಪಂಚದ ಏಕೈಕ ಪ್ರಜಾಪ್ರಭುತ್ವ ದೇಶ ನಮ್ಮದಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾದ ಮತದಾನದ ಹಕ್ಕನ್ನು ಪಡೆದುಕೊಂಡಿದ್ದಾರೆ. ಮತದಾನವೇ ನಾಯಕನನ್ನು ಆಯ್ಕೆ ಮಾಡುವ ಶಕ್ತಿಯಾಗಿದೆ. ಇದು ನಮ್ಮ ಧ್ವನಿಯ ಪ್ರತೀಕವಾಗಿದೆ. ಹಕ್ಕು-ಅಧಿಕಾರದ ಬೆಲೆ ನಿಜವಾಗಿ ಅರ್ಥವಾಗಬೇಕಾದರೆ ಇತಿಹಾಸ ಗೊತ್ತಿರಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.

ಅವರು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ರಾಷ್ಟ್ರೀಯ ಚುನಾವಣಾ ಆಯೋಗದ ವತಿಯಿಂದ ಶನಿವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ೧೫ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮತದಾನ ಹಕ್ಕಿನ ಬಗ್ಗೆ ಉಪನ್ಯಾಸ ನೀಡಿದ ಉಪ್ಪಿನಂಗಡಿ ಸರ್ಕಾರಿ ಕಾಲೇಜು ಉಪನ್ಯಾಸಕ ನಂದೀಶ್ ವೈ.ಡಿ. ಮತದಾನದ ಮೂಲಕ ಜೀವನದಲ್ಲಿ ಪ್ರಭಾವಿ ನಿರ್ಧಾರ ಕೈಗೊಳ್ಳುವ ಅವಕಾಶ ಇದ್ದಾಗಲೂ ನಾವು ಅದನ್ನು ಬಳಸಿಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ. ಅದರಲ್ಲೂ ನಗರ ಭಾಗದ ಜನತೆ ಮತದಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎನ್ನುವುದು ನೋವಿನ ವಿಚಾರವಾಗಿದೆ. ದೇಶದ ಭವಿಷ್ಯಕ್ಕೋಸ್ಕರ ಎಲ್ಲರೂ ಮತದಾನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಕಾನೂನು ಸೇವೆಗಳ ಸಮಿತಿಯ ಪ್ಯಾನಲ್ ವಕೀಲೆ ಅಶ್ವಿನಿ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಸುಲೋಚನಾ ಪ್ರಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ಕಳೆದ ಚುನಾವಣೆಯ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‌ಓಗಳಾದ ಪುಷ್ಪಾವತಿ, ಐವಿ ಗ್ರೆಟ್ಟಾ ಪಾಯಸ್, ಜಯಶ್ರೀ ಉಪ್ಪಿನಂಗಡಿ, ಉಪ ತಹಸೀಲ್ದಾರ್ ಚೆನ್ನಪ್ಪ ಗೌಡ, ತಾಲೂಕು ಕಚೇರಿ ಗ್ರೂಪ್ ಡಿ ನೌಕರ ರಾಧಾಕೃಷ್ಣ, ಗ್ರಾಮ ಸಹಾಯಕ ಬಾಲಕೃಷ್ಣ ಗೌಡ, ಆಹಾರ ನಿರೀಕ್ಷಕಿ ಸರಸ್ವತಿ, ಸಹಾಯಕ ಆಯುಕ್ತರ ಕಚೇರಿಯ ಲವ್ಯಶ್ರೀ, ಗ್ರಾಮ ಆಡಳಿತಾಧಿಕಾರಿಗಳಾದ ಜಂಗಪ್ಪ ಮತ್ತು ಸುಜಾತ ಅವರನ್ನು ಸನ್ಮಾನಿಸಲಾಯಿತು. ದಿ. ಕನಕರಾಜು ಅವರಿಗೆ ನೀಡಲಾದ ಮರಣೋತ್ತರ ಗೌರವ ಸ್ಮರಣಿಕೆಯನ್ನು ಅವರ ಪತ್ನಿ ಚೈತ್ರ ಹಾಗೂ ಪುತ್ರಿ ನೇಹಾ ಸ್ವೀಕರಿಸಿದರು.

Share this article