ಧರ್ಮಸ್ಥಳ ಯಕ್ಷಗಾನ ಮೇಳದಿಂದ ‘ಶ್ರೀರಾಮ ಪಟ್ಟಾಭಿಷೇಕ’ ಪ್ರದರ್ಶನ

KannadaprabhaNewsNetwork |  
Published : Jan 26, 2025, 01:35 AM IST
ಯಕ್ಷಗಾನ | Kannada Prabha

ಸಾರಾಂಶ

ಶ್ರೀರಾಮನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ ಉಜಿರೆ ಅಶೋಕ ಭಟ್ ಶ್ರೀರಾಮಚಂದ್ರನ ಆದರ್ಶ, ರಾಮರಾಜ್ಯ ಕಲ್ಪನೆ, ಸಮಾಜದ ಉದ್ಧಾರ ಮೊದಲಾದ ವಿಷಯಗಳನ್ನು ಪ್ರಧಾನವಾಗಿ ಪ್ರಸ್ತಾವಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಳೆದ ವರ್ಷ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಧರ್ಮಸ್ಥಳ ಮೇಳವು ಮೂರು ದಿವಸವೂ ‘ಶ್ರೀರಾಮ ಪಟ್ಟಾಭಿಷೇಕೋತ್ಸವ’ವನ್ನು ಯಕ್ಷಗಾನ ರಂಗದಲ್ಲಿ ಉತ್ಸವವಾಗಿ ಆಚರಿಸಲಾಗಿತ್ತು. ಈ ವರ್ಷ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಜ.22ರಂದು ಕುಂದಾಪುರದಲ್ಲಿ ‘ಕಾರುಣ್ಯಾಂಬುಧಿ ಶ್ರೀರಾಮ’ ಪ್ರಸಂಗದ ಪ್ರದರ್ಶನದೊಂದಿಗೆ ‘ಶ್ರೀರಾಮ ಪಟ್ಟಾಭಿಷೇಕ’ವನ್ನು ಆಚರಿಸಲಾಯಿತು. ಕುಂದಾಪುರದ ಹಂಗ್ಲೂರು ವೆಂಕಟಲಕ್ಷ್ಮಿ ಸಭಾಗೃಹದ ಆವರಣದಲ್ಲಿ ಶ್ರೀಮತಿ ಹೇಮಾವತಿ ಮತ್ತು ಚಂದ್ರಶೇಖರ ಐತಾಳರ ಸೇವೆಯ ಯಕ್ಷಗಾನ ಬಯಲಾಟದಲ್ಲಿ ಧರ್ಮಸ್ಥಳ ಮೇಳದ ಕಲಾವಿದರು ‘ಕಾರುಣ್ಯಾಂಬುಧಿ ಶ್ರೀರಾಮ’ ಪ್ರಸಂಗವನ್ನು ಪ್ರದರ್ಶಿಸಿದರು.

ಮೇಳದ ಯಜಮಾನರಾದ ಡಿ . ಹರ್ಷೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಮೇಳದ ಪ್ರಬಂಧಕರಾದ ಗಿರೀಶ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಅವರ ಸಲಹೆಯಂತೆ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಪ್ರಸಂಗವನ್ನು ಸಂಯೋಜಿಸಿ, ಪಟ್ಟಾಭಿಷೇಕದ ದೃಶ್ಯಾವಳಿಯನ್ನು ವಿಶೇಷವಾಗಿ ಆಯೋಜಿಸಲಾಯಿತು.

ಶ್ರೀರಾಮನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ ಉಜಿರೆ ಅಶೋಕ ಭಟ್ ಶ್ರೀರಾಮಚಂದ್ರನ ಆದರ್ಶ, ರಾಮರಾಜ್ಯ ಕಲ್ಪನೆ, ಸಮಾಜದ ಉದ್ಧಾರ ಮೊದಲಾದ ವಿಷಯಗಳನ್ನು ಪ್ರಧಾನವಾಗಿ ಪ್ರಸ್ತಾವಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಮೇಳದ ಹಿತೈಷಿ, ಅಭಿಮಾನಿಗಳಾದ ದಾಮೋದರ್ ಶರ್ಮ ಬಾರ್ಕೂರು, ಸೇವಾಕರ್ತರಾದ ಕೃಷ್ಣಮೂರ್ತಿ ನಾವಡ ಕಟ್ಕೆರೆ ಮುಂತಾದವರು ವಿವಿಧ ಪಾತ್ರದಲ್ಲಿ ರಂಗದಲ್ಲಿ ಕಾಣಿಸಿಕೊಂಡರು. ಮೇಳದ ಮ್ಯಾನೇಜರ್ ಗಿರೀಶ್ ಹೆಗಡೆ ಮತ್ತು ಪುಷ್ಪರಾಜ ಶೆಟ್ಟಿ ವಿಶೇಷವಾಗಿ ಭರತ ಮತ್ತು ಲಕ್ಷ್ಮಣನ ಪಾತ್ರ ನಿರ್ವಹಿಸಿದರು. ಮೇಳದ ಹಿರಿಯ, ಕಿರಿಯ ಎಲ್ಲ ಕಲಾವಿದರು ,ಸಿಬ್ಬಂದಿಗಳು ಉತ್ಸಾಹದಿಂದ ಸಂಭ್ರಮದಲ್ಲಿ ಭಾಗಿಗಳಾದರು. ಯಕ್ಷಗಾನ ಸೇವಾ ಬಯಲಾಟದಲ್ಲಿ ಇದೊಂದು ಅಪೂರ್ವ ಉತ್ಸವವಾಗಿ ಪ್ರೇಕ್ಷಕರನ್ನು ಬೆರಗುಗೊಳಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ