ವಾಕಿಂಗ್‌ಗೆ ತೆರಳಿದ್ದ ವೇಳೆ ಅಪಹರಣವಾಗಿದ್ದ ಮಕ್ಕಳ ತಜ್ಞ ಡಾ.ಸುನಿಲ ಕುಮಾರ ಕುರುಗೋಡಿನಲ್ಲಿ ಪತ್ತೆ

KannadaprabhaNewsNetwork | Updated : Jan 26 2025, 11:44 AM IST

ಸಾರಾಂಶ

ನಗರದಲ್ಲಿ ಶನಿವಾರ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ವೇಳೆ ಅಪಹರಣವಾಗಿದ್ದ ಸರ್ಕಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಪಿ.ಸುನಿಲಕುಮಾರ್ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಶನಿವಾರ ರಾತ್ರಿ ಪತ್ತೆಯಾಗಿದ್ದಾರೆ

ಬಳ್ಳಾರಿ: ನಗರದಲ್ಲಿ ಶನಿವಾರ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ವೇಳೆ ಅಪಹರಣವಾಗಿದ್ದ ಸರ್ಕಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಪಿ.ಸುನಿಲಕುಮಾರ್ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಶನಿವಾರ ರಾತ್ರಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪಹರಣಕ್ಕೆ ಒಳಗಾದ ವೈದ್ಯ ಆರೋಗ್ಯ ಹಾಗೂ ಸುರಕ್ಷಿತವಾಗಿದ್ದಾರೆ ಎಂದು ಎಸ್ಪಿ ಡಾ.ಶೋಭಾರಾಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

₹5 ಕೋಟಿ ಬೇಡಿಕೆ ಇಟ್ಟಿದ್ದ ಆಗಂತುಕರು:  ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ, ಪಟೇಲ್ ನಗರದ ನಿವಾಸಿ ಡಾ.ಪಿ.ಸುನಿಲಕುಮಾರ್ ಅವರನ್ನು ದುಷ್ಕರ್ಮಿಗಳು ಶನಿವಾರ ಬೆಳಗಿನಜಾವ ಅಪಹರಣಗೈದು ₹5 ಕೋಟಿ ಬೇಡಿಕೆ ಇಟ್ಟಿದ್ದರು. ಇಲ್ಲಿನ ಸತ್ಯನಾರಾಯಣ ಪೇಟೆಯ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಡಾ.ಸುನಿಲ್ ಜೊತೆ ಮೊದಲು ಮಾತಿಗಿಳಿದರು. ಬಳಿಕ ಕಾರ್‌ನಲ್ಲಿ ಕೂಡುವಂತೆ ಸೂಚಿಸಿದ್ದಾರೆ. ಇದಕ್ಕೆ ವಿರೋಧಿಸಿದ ವೈದ್ಯ ಸುನಿಲ್ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಕಾರ್‌ನಲ್ಲಿ ಕೂಡಿಸಿಕೊಂಡು ಅಪಹರಣ ಮಾಡಿದ್ದಾರೆ. ಬಳಿಕ ವೈದ್ಯನ ಸಹೋದರ ವೇಣುಗೋಪಾಲ ಗುಪ್ತಾ ಎಂಬುವರಿಗೆ ವಾಟ್ಸ್‌ ಆ್ಯಪ್‌ ಕರೆ ಮಾಡಿ, ನಿನ್ನ ಸಹೋದರ ವೈದ್ಯ ಸುನಿಲ್‌ ಅವರನ್ನು ಅಪಹರಿಸಿದ್ದು, ₹5 ಕೋಟಿ ನಗದು ಹಾಗೂ ಚಿನ್ನ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಪಹರಣವಾದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವೈದ್ಯ ಸುನಿಲ್ ಅಪಹರಣದ ಬಗ್ಗೆ ನಗರದ ಗಾಂಧಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣಕಾರರ ಪತ್ತೆಗಾಗಿ ಪೊಲೀಸರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.

ವೈದ್ಯರ ಮನೆಗೆ ರೆಡ್ಡಿ ಭೇಟಿ: ವೈದ್ಯರ ನಿವಾಸಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ ನೀಡಿ, ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯ ಸುನೀಲ್‌ ಅವರನ್ನು ಕಿಡ್ನಾಪ್‌ ಮಾಡಿರುವುದು ಬಳ್ಳಾರಿ ಜನರನ್ನು ಬೆಚ್ಚಿಬಿಳಿಸಿದೆ. ನಗರದಲ್ಲಿ ಡಾ.ಸುನೀಲ್‌ ಅವರದು ಒಳ್ಳೆ ಕುಟುಂಬವಾಗಿದ್ದು, ಯಾವುದೇ ಅಪಾಯವಿಲ್ಲದೆ ಮನೆಗೆ ಬರುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ದೂರಿದರು.

Share this article