ಬಳ್ಳಾರಿ ಜಿಲ್ಲೆಯಲ್ಲೇ ಕಂಪ್ಲಿ ಕ್ಷೇತ್ರದಿಂದ ಹೆಚ್ಚು ಮತದಾನ

KannadaprabhaNewsNetwork |  
Published : May 09, 2024, 01:09 AM IST
ಕಂಪ್ಲಿಯಲ್ಲಿ ಸ್ವೀಪ್  ಸಮಿತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮಗಳು  | Kannada Prabha

ಸಾರಾಂಶ

ಕಂಪ್ಲಿ ತಾಲೂಕು ಸ್ವೀಪ್ ಸಮಿತಿ ನಡೆಸಿದ ಕಾರ್ಯಕ್ರಮಗಳ ಮೂಲಕ ಜಾಗೃತರಾದ ಜನತೆ ಮತದಾನ ಮಾಡಿದ್ದು ಕಂಪ್ಲಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು, ಜೊತೆಗೆ ಹೋದ ಅವಧಿಯ ಚುನಾವಣೆಗಿಂತ ಈ ಬಾರಿ ಕ್ಷೇತ್ರದಲ್ಲಿ ಶೇ. 8%ರಷ್ಟು ಅಧಿಕ ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ಲೋಕಸಭಾ ಚುನಾವಣೆಯ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದಾಗಿನಿಂದ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ನಡೆಸಲಾದ ಮತದಾನ ಜಾಗೃತಿಯ ಪರಿಣಾಮವಾಗಿ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾಗಿದ್ದು, ಅಧಿಕಾರಿಗಳ ಕಾರ್ಯಕ್ಷಮತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಎರಡು ಹಂತಗಳಲ್ಲಿ ಜರುಗಿದ್ದು, ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಹಲವೆಡೆ ಬಿಸಿಲಿನ ನೆಪದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಏನೆಲ್ಲಾ ಜಾಗೃತಿ ಮೂಡಿಸಿ ಜನರಿಗೆ ಮತದಾನದ ಮಹತ್ವವನ್ನು ತಿಳಿಸಿ ಮತದಾರರನ್ನು ಮತಗಟ್ಟೆಯ ಬಳಿ ಬರುವಂತೆ ಮಾಡುವುದು ಎಲ್ಲೆಡೆ ಅಧಿಕಾರಿಗಳಿಗೆ ಬಹು ದೊಡ್ಡಸವಾಲಾಗಿತ್ತು. ಇದರ ಮಧ್ಯೆ ಕಂಪ್ಲಿ ತಾಲೂಕು ಸ್ವೀಪ್ ಸಮಿತಿ ನಡೆಸಿದ ಕಾರ್ಯಕ್ರಮಗಳ ಮೂಲಕ ಜಾಗೃತರಾದ ಜನತೆ ಮತದಾನ ಮಾಡಿದ್ದು ಕಂಪ್ಲಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು, ಜೊತೆಗೆ ಹೋದ ಅವಧಿಯ ಚುನಾವಣೆಗಿಂತ ಈ ಬಾರಿ ಕ್ಷೇತ್ರದಲ್ಲಿ ಶೇ. 8%ರಷ್ಟು ಅಧಿಕ ಮತದಾನವಾಗಿದೆ.

ಅಧಿಕಾರಿಗಳಿಂದ ವಿವಿಧ ಕಾರ್ಯಕ್ರಮಗಳು

ಕಂಪ್ಲಿ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ಎಆರ್‌ಒ ಶಿವಕುಮಾರ್ ಶೀಲವಂತ ನೇತೃತ್ವದಲ್ಲಿ, ತಹಸೀಲ್ದಾರ್ ಶಿವರಾಜ್ ಶಿವಪುರ, ತಾಪಂ ಇಒ ಆರ್.ಕೆ. ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಪಿಐ ಪ್ರಕಾಶ್ ಮಾಳಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮ್ಯಾರಥಾನ್ ಓಟ, ಭಾಷಣ ಸ್ಪರ್ಧೆ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನ ಜಾಥಾ, ಸೈಕಲ್ ಜಾಥಾ, ಪಂಜಿನ ಮೆರವಣಿಗೆ, ಡಿಜಿಟಲ್ ಬಳಕೆಯ ಮೂಲಕ ಜಾಗೃತಿ, ಕವನಗಳ ಸ್ಪರ್ಧೆ, ನಾಟಕ, ಏಕಪಾತ್ರ ಅಭಿನಯ, ರೀಲ್ಸ್ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

78.91% ಮತದಾನ

ಕಂಪ್ಲಿ- ಕುರುಗೋಡು ತಾಲೂಕು ಸೇರಿ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ 1,10477, ಮಹಿಳೆ 113480, ಇತರೆ 36 ಸೇರಿ ಒಟ್ಟಾರೆ 223993 ಮತದಾರರಲ್ಲಿ ಪುರುಷ 88574, ಮಹಿಳೆ 88220, ಇತರೆ 18 ಸೇರಿ ಒಟ್ಟಾರೆ 176812 ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ 78.91% ಮತದಾನವಾಗಿದ್ದು, ಕಂಪ್ಲಿ ಕ್ಷೇತ್ರ ಬಳ್ಳಾರಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ. ಈ ಹಿಂದಿನ 2019ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 70.72% ಮತದಾನವಾಗಿದ್ದರೆ ಈ ಬಾರಿಯ ಚುನಾವಣೆ ಶೇ. 78.91% ಮತದಾನ ಜರುಗಿದ್ದು ಹೋದ ಬಾರಿಗಿಂತ ಈ ಬಾರಿ ಶೇ. 8%ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ. ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆದ ಹಿನ್ನೆಲೆ ಅಧಿಕಾರಿಗಳ ಕಾರ್ಯಕ್ಷಮತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಅಲ್ಲದೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮತದಾರರು ಸುಡುಬಿಸಿಲಿನಲ್ಲೂ ಮತಗಟ್ಟೆಗೆ ಆಗಮಿಸಿ ಮಾತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ