ವಕ್ಫ್‌ ಬೋರ್ಡ್‌ನಿಂದ ನೋಟಿಸ್ ಬಂದರೆ ಸಂಪರ್ಕಿಸಿ: ವೈ.ಎಂ. ಸತೀಶ್

KannadaprabhaNewsNetwork | Published : Nov 4, 2024 12:19 AM

ಸಾರಾಂಶ

ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಎಷ್ಟು ಎಕರೆ ಜಮೀನು ವಕ್ಫ್‌ ಹೆಸರಿನಲ್ಲಾಗಿದೆ ಎಂಬುದನ್ನು ನಾವು ಸಹ ಹುಡುಕಾಟ ನಡೆಸಿದ್ದೇವೆ.

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ರೈತರು, ಮಠಗಳು, ಸಂಸ್ಥೆಗಳು ಸೇರಿದಂತೆ ಯಾರದ್ದೇ ಆಸ್ತಿ ವಕ್ಫ್‌ ಬೋರ್ಡ್‌ಗೆ ಸೇರಿಸಿರುವುದು ಕಂಡು ಬಂದಲ್ಲಿ ಕೂಡಲೇ ತಮ್ಮನ್ನು ಸಂಪರ್ಕಿಸಬಹುದು ಎಂದು ವಿಧಾನಪರಿಷತ್‌ ಸದಸ್ಯ ವೈ.ಎಂ.ಸತೀಶ್‌ ಮನವಿ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಎಷ್ಟು ಎಕರೆ ಜಮೀನು ವಕ್ಫ್‌ ಹೆಸರಿನಲ್ಲಾಗಿದೆ ಎಂಬುದನ್ನು ನಾವು ಸಹ ಹುಡುಕಾಟ ನಡೆಸಿದ್ದೇವೆ. ನಮ್ಮ ಕಾರ್ಯಕರ್ತರು ಹಾಗೂ ನಮ್ಮದೇ ಆದ ಸಂಪರ್ಕದಿಂದ ಪರಿಶೀಲಿಸುತ್ತೇವೆ. ಒಂದು ವೇಳೆ ರೈತರ ಜಮೀನುಗಳಿಗೆ ವಕ್ಫ್‌ನಿಂದ ನೋಟಿಸ್ ಜಾರಿಗೊಳಿಸಿದಲ್ಲಿ ಗಮನಕ್ಕೆ ತನ್ನಿ. ವಕ್ಫ್‌ ಬೋರ್ಡ್‌ ವಿರುದ್ಧ ನಾವು ಹೋರಾಟಕ್ಕೆ ಸಜ್ಜಾಗಿದ್ದೇವೆ. ನಿಮ್ಮ ಪರವಾಗಿ ನಾವು ಧ್ವನಿಯಾಗುತ್ತೇವೆ ಎಂದು ಹೇಳಿದರು.

ಬಳ್ಳಾರಿ ತಾಲೂಕಿನ ಮೋಕ ಹೋಬಳಿಯ ಬೊಮ್ಮನಹಾಳು, ಸಿಂಧವಾಳ ಹಾಗೂ ಕಾರೇಕಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ ಎಂದು ಗೊತ್ತಾಗಿದೆ. ಕೆಲವು ರೈತರು ಈಗಾಗಲೇ ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ವಕ್ಫ್‌ ಬೋರ್ಡ್‌ ಕಚೇರಿಗೆ ಹೋಗಿ, ಆಸ್ತಿ ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ, ವಕ್ಫ್‌ ಬೋರ್ಡ್‌ನಲ್ಲಿ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕಿನಿಂದಾಗಿಯೇ ರೈತರು ತೊಂದರೆಗೀಡಾಗಿದ್ದಾರೆ. ರಾಜ್ಯ ಸರ್ಕಾರ ಹಾಗೂ ವಕ್ಫ್‌ ಬೋರ್ಡ್‌ನ ಜನವಿರೋಧಿ ನೀತಿಯಿಂದಾಗಿಯೇ ಇಷ್ಟೆಲ್ಲಾ ಸಮಸ್ಯೆಯಾಗಿದೆ. ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸುತ್ತಿರುವ ಕ್ರಮವನ್ನು ಖಂಡಿಸಿ ನ. 4ರಂದು ಬಳ್ಳಾರಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬಳಿಕ ತಾಲೂಕಿನ ಬೊಮ್ಮನಹಾಳ ಗ್ರಾಮದ ಪೊಂಪನಗೌಡ ಮಾತನಾಡಿ, ನಮ್ಮ 8.16 ಸೆಂಟ್ಸ್‌ ಜಮೀನನ್ನು ವಕ್ಫ್‌ ನವರು ನಮ್ಮದೆಂದು ನೋಟಿಸ್‌ ನೀಡಿದ್ದಾರೆ ಎಂದು ಅಳಲು ತೋಡಿಕೊಂಡರು. ಗ್ರಾಮದ ಪಿತ್ರಾರ್ಜಿತ ಆಸ್ತಿಗೂ ವಕ್ಫ್‌ ಬೋರ್ಡ್‌ ಎಂದು ಬದಲಾಯಿಸಲಾಗಿದೆ. ನೋಟಿಸ್‌ ಬಂದ ಬಳಿಕವೇ ನಮಗೆ ಗೊತ್ತಾಯಿತು ಎಂದು ತಿಳಿಸಿದರು.

Share this article