ಹಾನಗಲ್ಲ: ಸಜ್ಜನರ ಸಂಗದೊಂದಿಗಿದ್ದು ಸುಜ್ಞಾನ ಸಂಸ್ಕಾರ ಪಡೆದು ಯಶಸ್ವಿ ಬದುಕಿನ ನಡೆ ನಮ್ಮದಾಗಬೇಕಾಗಿದ್ದು, ಬದಲಾದ ಕಾಲದಲ್ಲಿ ಕೌಟುಂಬಿಕ ಸಂಬಂಧಗಳು ಆಪ್ತತೆಯನ್ನು ಉಳಿಸಿಕೊಂಡು ಮುನ್ನಡೆಯುವ ಅಗತ್ಯತೆ ಇದೆ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಚಾರ್ಯ ಶ್ರೀದೇವಿ ಗುಜನೂರಮಠ ತಿಳಿಸಿದರು.ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತಿ ಪತ್ನಿಯರಿಬ್ಬರೂ ಉದ್ಯೋಗದ ಒತ್ತಡ, ಮಕ್ಕಳು ವಸತಿನಿಲಯಗಳಲ್ಲಿದ್ದು ಶಾಲೆಯ ಓದು ಸೇರಿದಂತೆ ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಲು ಬೇಕಾಗುವ ವಾತಾವರಣ ಕಡಿಮೆಯಾಗುತ್ತಿದೆ. ಇಡೀ ಕುಟುಂಬ ಕೂಡಿ ಬಾಳುವ ವ್ಯವಸ್ಥೆಯಲ್ಲಿ ಸುಖ- ದುಃಖಗಳನ್ನು ಹಂಚಿಕೊಂಡು ಬದುಕು ನಡೆಯುತ್ತಿತ್ತು. ಪಾಶ್ಚಾತ್ಯ ಸಂಸ್ಕೃತಿಯ ಅಡ್ಡ ಪರಿಣಾಮ ನಮ್ಮ ಮೇಲೆ ಆಗದಂತೆ ನಿಗಾ ವಹಿಸಬೇಕಾಗಿದೆ. ಉತ್ತಮ ಸಂಸ್ಕಾರ ಕೇಂದ್ರಿತವಾದ ವಚನಗಳು ನಮ್ಮ ಪ್ರತಿ ಮನೆಯ ಮಾತಾದರೆ ಒಳ್ಳೆಯ ಸಂಸ್ಕಾರ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ನಿರಂಜನ ಗುಡಿ, ವಚನಗಳಲ್ಲಿ ಸಮರ್ಪಣಾ ಭಾವವಿದೆ. ಕಾಯಕಕ್ಕೆ ಮೊದಲ ಆದ್ಯತೆ ಇದೆ. ಆಧ್ಯಾತ್ಮಿಕ ಚಿಂತನೆಯೂ ಒಳಗೊಂಡು ಸನ್ಮಾರ್ಗದ ಬೋಧನೆ ವಚನಗಳಲ್ಲಿದೆ. ಬಸವಾದಿ ಪ್ರಮಥರು ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ನೀಡಿ ಗೌರವಿಸಿದ್ದರು. ಚಿಂತನೆಗಳಲ್ಲಿ ಮಹಿಳಾ ವಚನಕಾರ್ತಿಯರ ಪಾಲು ದೊಡ್ಡದಿದೆ. ಆರ್ಥಿಕ ಸಮಾಜಿಕ ಸಮಾನತೆಗೆ ಮೊದಲ ಸ್ಥಾನ ನೀಡಿದ್ದ ವಚನಕಾರರು ಎಲ್ಲ ಕಾಲಕ್ಕೂ ಸಲ್ಲುವ ಸಂದೇಶಗಳನ್ನು ನೀಡಿದ್ದಾರೆ ಎಂದರು.ಉಪನ್ಯಾಸ ನೀಡಿದ ಶಿಕ್ಷಕಿ ಎಲ್.ಬಿ. ಓಂಕಾರಿ, ವಚನಗಳು ಸದ್ಗುಣ ಸಂಪನ್ನತೆಯನ್ನು ಸಾರುವ ಅತ್ಯಂತ ಸರಳ ಸಮಾಜಮುಖಿ ಚಿಂತನೆಗಳಾಗಿವೆ. ಎಲ್ಲ ಕಾಲಕ್ಕೂ ಸಲ್ಲುವ ವಚನಗಳು ಈಗ ಎಲ್ಲ ದೇಶ ಭಾಷೆಯವರನ್ನೂ ಆಕರ್ಷಿಸಿವೆ. ಇಡೀ ಮಾನವ ಕುಲದ ಉನ್ನತಿಗೆ ಬೇಕಾಗುವ ಸಂಗತಿಗಳು ಇಲ್ಲಿವೆ. ಮನುಷ್ಯನಲ್ಲಿನ ಮೃಗತ್ವವನ್ನು ಪರಿಹರಿಸಿ ಮಾನವತ್ವದ ನೆಲೆಯನ್ನು ನೀಡುವ ಶುಭ್ರ ಸಂದೇಶಗಳು ಇಲ್ಲಿವೆ ಎಂದರು.ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ ಆಶಯ ನುಡಿ ನುಡಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಎಸ್.ಸಿ. ಕಲ್ಲನಗೌಡರ, ಸಿ. ಮಂಜುನಾಥ, ಎಸ್.ಸಿ. ಹೇಮಗಿರಿಮಠ, ಅಶೋಕ ದಾಸರ, ಎಂ.ಎಸ್. ಹುಲ್ಲೂರ, ಸುಭಾಸ ಹೊಸಮನಿ, ಎಂ.ಎಸ್. ಅಮರ, ಅನಿತಾ ಕಿತ್ತೂರ, ಶೋಭಾ ಪಾಟೀಲ, ಸುಮಂಗಲಾ ತಟ್ಟಿಮಠ, ಅಕ್ಕಮ್ಮ ಶೆಟ್ಟರ, ರೂಪಶ್ರೀ ಗೌಳಿ, ಸವಿತಾ ಉದಾಸಿ, ನೀಲಮ್ಮ ಆಲದಕಟ್ಟಿ, ಮಮತಾ ಹಂಪಣ್ಣನವರ, ಜ್ಯೋತಿ ಬೆಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.