ಹೆಸರಿಗಷ್ಟೇ ಉಸ್ತುವಾರಿ; ಬಳ್ಳಾರಿಗೆ ಜಮೀರ್‌ ಬರೋದು ಯಾವಾಗ?

KannadaprabhaNewsNetwork |  
Published : Jan 14, 2025, 01:00 AM IST
ಸ | Kannada Prabha

ಸಾರಾಂಶ

ಉಸ್ತುವಾರಿ ಹೊಣೆ ಹೊತ್ತ ಸಚಿವ ಜಮೀರ್ ಅಹ್ಮದ್ ಬಳ್ಳಾರಿಗೆ ಬಂದು ಹೋಗಿ ಬರೋಬ್ಬರಿ ನಾಲ್ಕು ತಿಂಗಳಾದವು.

ಮಂಜುನಾಥ ಕೆ.ಎಂ.

ಬಳ್ಳಾರಿ: ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಸಚಿವ ಜಮೀರ್ ಅಹ್ಮದ್ ಬಳ್ಳಾರಿಗೆ ಬಂದು ಹೋಗಿ ಬರೋಬ್ಬರಿ ನಾಲ್ಕು ತಿಂಗಳಾದವು. ಅದರ ಬಳಿಕ ಈವರೆಗೆ ಸಚಿವರ ಪತ್ತೆಯಿಲ್ಲ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಮಂತ್ರಿ ಈವರೆಗೆ ಇತ್ತ ಕಣ್ಣಾಯಿಸಿಲ್ಲ. ಮುಖ್ಯಮಂತ್ರಿ ಜಿಲ್ಲೆಗೆ ಬಂದಾಗಷ್ಟೇ ಕೆಲಹೊತ್ತು ಕಾಣಿಸಿಕೊಂಡು ಮರೆಯಾಗುವ ಸಚಿವರು, ಮತ್ತೆ ಕಾಣಿಸಿಕೊಳ್ಳುವುದು ಸಿಎಂ ಜಿಲ್ಲೆಗೆ ಭೇಟಿ ನೀಡಿದಾಗಲೇ. ಇಲ್ಲವೇ ಚುನಾವಣೆ ಬಂದಾಗ ಮಾತ್ರ ಎಂಬಂತಾಗಿದೆ. ಜಿಲ್ಲೆಯ ಅಭಿವೃದ್ಧಿ ನೆಲಕಚ್ಚುತ್ತಿದ್ದು ಇಡೀ ಆಡಳಿತ ಅಧಿಕಾರಿಗಳ ಕಪಿಮುಷ್ಠಿಗೇರಿದೆ. ರಾಜ್ಯ ಸರ್ಕಾರದ ಈ ಧೋರಣೆ ಗಣಿಜಿಲ್ಲೆಯ ಜನರಿಗೆ ಶಾಪಗ್ರಸ್ತವಾಗಿ ಪರಿಣಮಿಸಿದೆ.

ಬಾಣಂತಿಯರು ಸತ್ತರೂ ಬರಲಿಲ್ಲ:

ಹೆರಿಗೆಗೆಂದು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಐವರು ಬಾಣಂತಿಯರು ಸಾವನ್ನಪ್ಪಿದರು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರತಿಪಕ್ಷ ನಾಯಕರು ಬಳ್ಳಾರಿಗೆ ಬಂದರು. ವಿಧಾನಸಭೆ, ವಿಧಾನಪರಿಷತ್‌ನಲ್ಲೂ ಸಾವು ಪ್ರಕರಣ ಪ್ರತಿಧ್ವನಿಸಿತು. ಇಷ್ಟೆಲ್ಲ ಬೆಳವಣಿಗೆಯಾದರೂ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹ್ಮದ್ ಬಳ್ಳಾರಿ ಕಡೆ ತಿರುಗಿ ನೋಡಲೇ ಇಲ್ಲ.

ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುರುಕಾಗಿ ಪ್ರಚಾರ ಮಾಡಿದ್ದ ಸಚಿವರು ಪುನಃ ಬಳ್ಳಾರಿಯತ್ತ ಸುಳಿಯಲಿಲ್ಲ. ವಿಪರ್ಯಾಸ ಎಂದರೆ ಜಿಲ್ಲಾ ಉಸ್ತುವಾರಿ ಮಂತ್ರಿಯ ಅನುಪಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳ ಹಿನ್ನಡೆ ಕುರಿತು ಬಿಜೆಪಿ ನಾಯಕರೂ ಸೊಲ್ಲೆತ್ತುತ್ತಿಲ್ಲ. ಪಕ್ಷದ ರಾಜ್ಯ ಸಮಿತಿ ಕರೆಯ ಮೇರೆಗೆ ಸುದ್ದಿಗೋಷ್ಠಿ ನಡೆಸುವುದು, ಪಕ್ಷ ಸೂಚನೆ ಇದ್ದಾಗ ಒಂದಷ್ಟು ಜನ ಸೇರಿ ಪ್ರತಿಭಟನೆ ನಡೆಸಿದ್ದು ಬಿಟ್ಟರೆ, ಪ್ರತಿಪಕ್ಷವಾಗಿ ಸ್ಥಳೀಯ ಸಮಸ್ಯೆಗಳ ಆಧರಿಸಿ ದೊಡ್ಡ ಹೋರಾಟ ರೂಪಿಸಲಿಲ್ಲ. ಇದು ಆಡಳಿತಾರೂಢರಿಗೆ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಸಮಸ್ಯೆಗಳ ಆಲಿಸುವವರು ಯಾರು?

ಬಳ್ಳಾರಿ ಅಪಾರ ಸಂಪನ್ಮೂಲ ಭರಿತ ಶ್ರೀಮಂತ ಜಿಲ್ಲೆ. ಆದರೆ ಆಡಳಿತ ಅನುಷ್ಠಾನದಲ್ಲಿ ಎಲ್ಲೂ ಈ ಶ್ರೀಮಂತಿಕೆ ಕಂಡು ಬರುತ್ತಿಲ್ಲ. ಆಡಳಿತವೇ ಅವ್ಯವಸ್ಥೆಯ ಕೂಪವಾಗಿದೆ. ಸರ್ಕಾರಿ ಕಚೇರಿ ಸಿಬ್ಬಂದಿ ಸಕಾಲಕ್ಕೆ ಬರುವುದಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗಳಲ್ಲಿ ಇರುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಸೀಮಿತವಾಗಿದ್ದು ಹೊರಗಡೆ ಓಡಾಡುವುದಿಲ್ಲ. ಜಿಲ್ಲೆಯಲ್ಲಿ ಹೇಳೋರು, ಕೇಳೋರು ಇಲ್ಲವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಈ ಹಿಂದೆ ಜಿಪಂ, ತಾಪಂ ಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ, ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ, ಪಂಚಾಯಿತಿ ಚುನಾವಣೆಗಳು ನನೆಗುದಿಗೆ ಬಿದ್ದ ಬಳಿಕ ಎಲ್ಲವೂ ಅಧಿಕಾರಿಗಳ ಹೇಳಿದ್ದೇ ಆಡಳಿತ ಎನ್ನುವಂತಾಗಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಜಮೀರ್ ವಿರುದ್ಧ ಜನಾಕ್ರೋಶ:

ಜಿಲ್ಲಾ ಉಸ್ತವಾರಿ ಮಂತ್ರಿ ಬಳ್ಳಾರಿಯತ್ತ ಮುಖಮಾಡದಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಳ್ಳಾರಿ ಜಿಲ್ಲೆ ಕೊಡುಗೆ ಹೆಚ್ಚಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಇಲ್ಲಿಂದ ಆಯ್ಕೆ ಮಾಡಿ ಕಳಿಸಲಾಗಿದೆ. ಆದರೆ, ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವ ಬದಲು ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಆಸಕ್ತಿ ಇಲ್ಲದವರನ್ನು ಜಿಲ್ಲೆಯ ಉಸ್ತುವಾರಿ ಮಂತ್ರಿಯನ್ನಾಗಿಸಿ ಜಿಲ್ಲೆಯ ಅಭಿವೃದ್ಧಿ ಹಿನ್ನೆಡೆಗೆ ಮುಖ್ಯಮಂತ್ರಿ ಕಾರಣರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಸಚಿವ ಜಮೀರ್ ಅಹ್ಮದ್ ಅವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿಸಿರುವ ಸಿಎಂ ಸಿದ್ದರಾಮಯ್ಯ ಬಳ್ಳಾರಿಯ ಕಡೆ ಗಮನ ನೀಡದಿದ್ದರೆ ಹೇಗೆ? ಇಷ್ಟವಿಲ್ಲದ ವ್ಯಕ್ತಿಗೆ ಜಿಲ್ಲೆಯ ಜವಾಬ್ದಾರಿ ಕೊಟ್ಟಿರುವುದರಿಂದಾಗಿಯೇ ಬಳ್ಳಾರಿಗೆ ಈ ಸ್ಥಿತಿ ಬಂದಿದೆ ಎನ್ನುತ್ತಾರೆ ಬಳ್ಳಾರಿಯ ಎಸ್.ಎನ್.ಪೇಟೆಯ ಖಾಸಗಿ ಉದ್ಯೋಗಿ ವಿಜಯಶಂಕರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ