ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕ್ರಯವಾಗಿರುವ ಜಮೀನು ತಮ್ಮದೆಂದು ಅಕ್ರಮವಾಗಿ ಜಮೀನಿಗೆ ನುಗ್ಗಿ ಡ್ರಿಪ್ ಪೈಪ್‌ಗಳಿಗೆ ಬೆಂಕಿ ಇಟ್ಟು, ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಬೆಳೆ ಹಾಗೂ ಹನಿ ನೀರಾವರಿಗೆ ಅಳವಡಿಸಿದ್ದ ಲಕ್ಷಾಂತರ ರೂ.ಗಳ ಪೈಪ್‌ಗಳನ್ನು ನಾಶ ಮಾಡಿರುವ ಘಟನೆ ತಾಲೂಕಿನ ಗುನ್ನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.ತಾಲೂಕಿನ ಕೈವಾರ ಹೋಬಳಿ ಗುನ್ನಹಳ್ಳಿ ಗ್ರಾಮ ಸರ್ವೆ ನಂ 24/1 ರಲ್ಲಿ 1 ಎಕರ 17 ಗುಂಟೆ ಜಮೀನನ್ನು ಕೃಷ್ಣಪ್ಪ ಎಂಬುವವರಿಂದ ಗುನ್ನಹಳ್ಳಿ ಗ್ರಾಮದ ನಾಗೇಶ್ ಖರೀದಿಸಿ ಕ್ರಯ ಮಾಡಿಕೊಂಡಿದ್ದು ಜಮೀನಿನಲ್ಲಿ 17 ಗುಂಟೆ ಜಮೀನು ತಮಗೆ ಸೇರಬೇಕೆಂದು ಅದೇ ಗ್ರಾಮದ ಮುನಿಶಾಮಿರೆಡ್ಡಿ ತನ್ನ ಸಹಚರರೊಂದಿಗೆ ಜಮೀನಿಗೆ ನುಗ್ಗಿ ಬೆಳೆನಾಶ ಮಾಡಿ ಅಲ್ಲಿಯೇ ಇದ್ದ ಬೆಳೆಗೆ ಅಳವಡಿಸಿದ್ದ ಹನಿ ನೀರಾವರಿ ಪೈಪ್‌ಗಳನ್ನು ಸುಟ್ಟಿದ್ದು ಈ ಹಿನ್ನೆಲೆಯಲ್ಲಿ ಆತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನಿನ ಮಾಲೀಕರಾದ ನಾಗವೇಣಿ ಮಾತನಾಡಿ, ಗುನ್ನಹಳ್ಳಿ ಗ್ರಾಮ ಸರ್ವೆ ನಂ 24/1 ರಲ್ಲಿ 1.17 ಎಕರೆ ಜಮೀನು ತನ್ನ ಹೆಸರಿಗೆ ಕ್ರಯ ಮಾಡಿಕೊಂಡಿದ್ದು, ಜಮೀನಿನೊಳಗೆ ಮುನಿಶಾಮಿರೆಡ್ಡಿ ಅಕ್ರಮವಾಗಿ ನುಗ್ಗಿ ನಮ್ಮ ಮೇಲೆ ಹಲ್ಲೆ ಮಾಡಿ ಜಮೀನು ತಮಗೆ ಸೇರಿದೆಂದು 50ಕ್ಕೂ ಹೆಚ್ಚು ಜನರನ್ನು ತಂದು ನಮ್ಮ ಮೇಲೆ ಹಲ್ಲೆ ಮಾಡಿದ್ದು ನಾವು ಗ್ರಾಮದಿಂದ 2 ಕಿ.ಮೀ. ದೂರದ ತೋಟದಲ್ಲಿ ಒಂಟಿ ಮನೆಯಲ್ಲಿ ವಾಸವಾಗಿದ್ದು ನಮಗೆ ರಕ್ಷಣೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ಬೆಳೆನಾಶ:
ಮುನಿಶಾಮಿರೆಡ್ಡಿ ಬೆಳಗಿನ ಜಾವ 5 ಗಂಟೆಗೆ ಸುಮಾರು 50ಕ್ಕೂ ಹೆಚ್ಚು ಜನರೊಂದಿಗೆ ಮುಸುಕು ಧರಿಸಿಕೊಂಡು ಬಂದು ನಮ್ಮ ಜಮೀನಿನಲ್ಲಿ ಇದ್ದ ರೇಷ್ಮೆ ಬೆಳೆಯನ್ನು ನಾಶ ಮಾಡಿ, ಹನಿನೀರಾವರಿಗೆ ಅಳವಡಿಸಿದ್ದ ಲಕ್ಷಾಂತರ ರೂಗಳ ಪೈಪ್‌ಗಳನ್ನು ಸುಟ್ಟು ಭಸ್ಮಮಾಡಿದ್ದು, ನೂತನವಾಗಿ ಕೊರೆಸಿದ್ದ ಕೊಳವೆಬಾವಿಯನ್ನು ಮುಚ್ಚಿಹಾಕಿ ನಮಗೆ ಪ್ರಾಣ ಬೆದರಿಕೆಯಾಕಿದ್ದಾರೆಂದು ದೂರಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್‌ರು ಭೇಟಿ ನೀಡಿ ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.