- ರವೀಂದ್ರನಾಥ್ ನಿವಾಸ ಸಭೆಯಲ್ಲಿ ಉತ್ತರ ಕಾರ್ಯಕರ್ತರ ಸಭೆ ನಿರ್ಧಾರ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಬೇಕೆಂಬ ಪ್ರಮುಖ ಬೇಡಿಕೆಯನ್ನೇ ಬಿಜೆಪಿ ರಾಜ್ಯ ನಾಯಕರು ಭೇಟಿ ನೀಡಿದ ವೇಳೆ ಮುಂದಿಡಲು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಗಟ್ಟಿ ನಿಲುವು ಕೈಗೊಳ್ಳಲಾಯಿತು.ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನಿವಾಸದ ಅಂಗಳದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮುಖಂಡರು ಮಾತನಾಡಿದರು. ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧರೆಂಬ ಅಭಿಪ್ರಾಯ ಕಾರ್ಯಕರ್ತರಿಂದ ವ್ಯಕ್ತವಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ಸಂಘಟನಾ ಮಂತ್ರಿ ರಾಜೇಶ ಸೇರಿದಂತೆ ಮುಖಂಡರು ದಾವಣಗೆರೆಗೆ ಇನ್ನು 2-3 ದಿನದಲ್ಲೇ ಬರಬಹುದು. ದಾವಣಗೆರೆ ಅಭ್ಯರ್ಥಿಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ರಾಜ್ಯ ನಾಯಕರು ಮಾತುಕತೆಗೆ ಬರಲಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ಅಭ್ಯರ್ಥಿ ಬದಲಾವಣೆ ಮಾಡಬೇಕೆಂಬುದೇ ನಮ್ಮ ಗಟ್ಟಿ ನಿಲುವು ಎಂದು ಸ್ಪಷ್ಟಪಡಿಸಿದರು.ಎಸ್.ಎ.ರವೀಂದ್ರನಾಥ ಮಾತನಾಡಿ, ಬಿಜೆಪಿಯಲ್ಲಿ ಒಮ್ಮೆ ಟಿಕೆಟ್ ಘೋಷಣೆ ಮಾಡಿದರೆ ಮುಗಿಯಿತು ಎಂಬ ಆಲೋಚನೆ ಕೆಲವರಲ್ಲಿದೆ. ಆದರೆ, ಗುಜರಾತ್‌ನ ವಡೋದರ ಸೇರಿದಂತೆ 2 ಕಡೆ ಹಾಗೂ ಪಶ್ಚಿಮ ಬಂಗಾಳದ ಒಂದು ಕ್ಷೇತ್ರದಲ್ಲಿ ಘೋಷಣೆ ಮಾಡಿದ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಅಭ್ಯರ್ಥಿಯ ಬದಲಾವಣೆ ಮಾಡಬೇಕು ಎಂಬ ನಮ್ಮ ನಿಲುವಿನಲ್ಲಿ ಸಡಿಲಿಕೆ ಇಲ್ಲ. ಇದು ನಮ್ಮೆಲ್ಲರ ನಿಲುವೂ ಆಗಿದೆ ಎಂದು ಪುನರುಚ್ಛರಿಸಿದರು.
ಪಕ್ಷದ ಟಿಕೆಟ್ ವಿಚಾರವಾಗಿ ಸಾಕಷ್ಟು ಸಲ ಬೆಂಗಳೂರು, ದೆಹಲಿಗೆ ಹೋಗಿ ಬಂದಿದ್ದೇವೆ. ಹಾಗಾಗಿ, ರಾಜ್ಯ ನಾಯಕರೇ ಮಾತುಕತೆಗೆ ಬರಲಿ. ನಾವಂತೂ ಯಾರಲ್ಲಿಗೂ ಹೋಗುವುದಿಲ್ಲ. ಪಕ್ಷದ ನಾಯಕರೇ ಬಂದು ಸಮಸ್ಯೆ ಇತ್ಯರ್ಥಪಡಿಸಬೇಕು. ಪಕ್ಷದ ಅಭ್ಯರ್ಥಿ ಬದಲಾವಣೆ ಮಾಡದಿದ್ದರೆ, ನಮ್ಮ ಕಡೆಯಿಂದಲೂ ಒಬ್ಬ ಅಚ್ಚರಿಯ ಅಭ್ಯರ್ಥಿ ಸಿದ್ಧವಾಗಿದ್ದಾರೆ ಎಂದು ಸೂಚ್ಯವಾಗಿ ಎಚ್ಚರಿಸಿದರು.ಪಕ್ಷದ ಮುಖಂಡ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಹಾವೇರಿ ಪ್ರಭಾರ ಎಲ್.ಎನ್. ಕಲ್ಲೇಶ, ಮಾಜಿ ಮೇಯರ್‌ಗಳಾದ ಬಿ.ಜಿ.ಅಜಯಕುಮಾರ, ವಿಠ್ಠಲ್, ಕೆ.ಆರ್. ವಸಂತಕುಮಾರ, ಮಾಡಾಳ್ ಮಲ್ಲಿಕಾರ್ಜುನ, ರವಿಕುಮಾರ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಡಿ.ಎಸ್. ಶಿವಶಂಕರ, ಶಿವರಾಜ ಪಾಟೀಲ್, ಚುಕ್ಕಿ ಮಂಜು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ರೈತ ಮುಖಂಡರು ಪಾಲ್ಗೊಂಡಿದ್ದರು.
- - - ಬಾಕ್ಸ್‌ನಾಳೆಯಿಂದ ಹರಿಹರ ಮಠಗಳ ದರ್ಶನ ಮಾ.26ರಂದು ಬೆಳಗ್ಗೆಯಿಂದ ಹರಿಹರ ತಾಲೂಕಿನ ಪಂಚಮಸಾಲಿ ಮಠ, ವಾಲ್ಮೀಕಿ ಪೀಠ, ಕನಕ ಪೀಠ, ವೇಮನ ಪೀಠ, ನಂದಿಗುಡಿ ಮಠ ಹೀಗೆ ಐದೂ ಮಠಗಳಿಗೆ ಹೋಗಿ, ಶ್ರೀಗಳ ಆಶೀರ್ವಾದ ಪಡೆಯಲಿದ್ದೇವೆ ಎಂದು ಮುಖಂಡರು ಸಭೆಯಲ್ಲಿ ಘೋಷಿಸಿದರು.ನಮ್ಮ ನಿಲುವು ಬದಲಾವಣೆ ಆಗುವುದಿಲ್ಲ. ಇನ್ನು 2-3 ದಿನದಲ್ಲಿ ಯಡಿಯೂರಪ್ಪ ಇತರರು ದಾವಣಗೆರೆಗೆ ಬರುವುದಾಗಿ ಹೇಳಿದ್ದಾರೆ. ಬಂದ ಮೇಲೆ ಏನು ಚರ್ಚೆಯಾಗುತ್ತದೋ, ಅದನ್ನು ಆಧರಿಸಿ, ನಮ್ಮ ಮುಂದಿನ ನಡೆ ಇರುತ್ತದೆ ಎಂದು ಒಕ್ಕೊರಲಿನಿಂದ ಹೇಳಿದರು.
- - - -24ಕೆಡಿವಿಜಿ10:ಶಿರಮಗೊಂಡನಹಳ್ಳಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿದರು.