ಶಿಕಾರಿಪುರ: ಪ್ರತಿ ಮನೆಯಲ್ಲಿ ವಚನಗಳ ಪಠಣ ಜತೆಗೆ ಕಡ್ಡಾಯವಾಗಿ ಶಿವಶರಣರ ತತ್ವಾದರ್ಶಗಳನ್ನು ಪಾಲಿಸಬೇಕು. ಹೀಗಾದಲ್ಲಿ ಪುನಃ ಸಮಾಜದಲ್ಲಿ ಶರಣರ ಆಶಯದ ಕಾಯಕ, ದಾಸೋಹದ ಸಮ ಸಮಾಜ ನಿರ್ಮಾಣ ಆಗುವಲ್ಲಿ ಸಂದೇಹವಿಲ್ಲ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಕೆ. ಶಶಿಧರಸ್ವಾಮಿ ಹೇಳಿದರು.
ಪಟ್ಟಣದ ಶಾಂತಿನಗರದ ಶರಣ, ಹಿರಿಯ ಸಹಕಾರಿ ಧುರೀಣ ಡಾ. ಬಿ.ಡಿ. ಭೂಕಾಂತ್ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಧರ್ಮಪರ್ವ ಸಮಾಜ ಸೇವಾ ಟ್ರಸ್ಟ್ ಆಯೋಜಿಸಿದ್ದ ದತ್ತಿ ಉಪನ್ಯಾಸ, ಧರ್ಮಪರ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶರಣರು ಸಮಸಮಾಜ ನಿರ್ಮಾಣದ ಹೊಣೆ ಹೊತ್ತು ಅಪಾರ ಜ್ಞಾನವನ್ನು ಸರಳ ಪದಗಳಲ್ಲಿ ವಚನಗಳ ಮೂಲಕ ನೀಡಿದ್ದಾರೆ. ಅವುಗಳ ಪಠಣ ಮಾತ್ರ ಆಗುತ್ತಿಲ್ಲ. ಈ ದಿಸೆಯಲ್ಲಿ ಎಲ್ಲರ ಮನೆಯಲ್ಲಿ ಪ್ರತಿದಿನ ವಚನ ಓದು ಆಗಬೇಕು. ವಚನಗಳಲ್ಲಿನ ಶರಣರ ಆಶಯದಂತೆ ಬದುಕಬೇಕಿದೆ ಎಂದರು.
ಬಸವಾಶ್ರಮದ ಮಾತೆ ಶರಣಾಂಬಿಕೆ ಮಾತನಾಡಿ, ಶಿಕ್ಷಕರಾಗಿದ್ದ ಧರ್ಮಪ್ಪ ಕೇವಲ ಮಕ್ಕಳಿಗೆ ಪಾಠ ಮಾಡದೇ, ಸಮಾಜದ ಅಂಕುಡೊಂಕುಗಳ ತಿದ್ದುವ ಕೆಲಸ ಮಾಡಿದರು. ಅವರ ಪುತ್ರ ಬಿ.ಡಿ.ಭೂಕಾಂತ್ ಹಲವು ಸಹಕಾರ ಸಂಘ ರಚಿಸಿ ತನ್ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿದ್ದಾರೆ. ಅದಕ್ಕಾಗಿ ಅವರಿಗೆ 13ಕ್ಕೂ ಹೆಚ್ಚು ರಾಜ್ಯಮಟ್ಟದ ಪ್ರಶಸ್ತಿ ಸಂದಿವೆ. ಅವರ ಸೇವೆಯ ದಾರಿ ಎಲ್ಲರಿಗೂ ಮಾದರಿ ಆಗಬೇಕು ಎಂದು ಹೇಳಿದರು.ಉಪನ್ಯಾಸಕ ಎಚ್.ಎ.ದಿನಕರ ದತ್ತಿ ಉಪನ್ಯಾಸ ನೀಡಿದರು. ಧರ್ಮಪರ್ವ ಸೇವಾ ಟ್ರಸ್ಟ್ ವತಿಯಿಂದ ರುದ್ರಮೂರ್ತಿ ಸಾಲೂರು, ಬಿದರಹಳ್ಳಿ ನಾಗೇಶಪ್ಪ, ಸುರಗಿಹಳ್ಳಿ ಶಾಂತಮ್ಮ, ಬಸವನಗೌಡ ನಂದಿಹಳ್ಳಿ, ಅಂಗಡಿ ಜಗದೀಶ್, ಗದಿಗೆಪ್ಪ ದೇವಿರಪ್ಪ ಕಾಗಿನೆಲೆ ಅವರಿಗೆ ಧರ್ಮಪರ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದತ್ತಿದಾನಿ ಶಾಂತಲಾ ಬಿ.ಡಿ.ಭೂಕಾಂತ್, ಮುಖಂಡ ಎನ್.ವಿ.ಈರೇಶ್, ಸುಭಾಷ್ಚಂದ್ರ ಸ್ಥಾನಿಕ್, ಶಿವಾನಂದಪ್ಪ, ಸೋಮಶೇಖರ ಗಟ್ಟಿ, ಬೇಗೂರು ಮಂಜುನಾಥ್, ಜಿ.ಎಂ. ನಾಗರಾಜ, ಬಿ.ಕಿರಣಕಾಂತ ಮತ್ತಿತರರು ಉಪಸ್ಥಿತರಿದ್ದರು.- - - -15ಕೆಎಸ್.ಕೆಪಿ5:
ಶಿಕಾರಿಪುರದಲ್ಲಿ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಬಿದರಹಳ್ಳಿ ನಾಗೇಶಪ್ಪ ಮತ್ತಿತರರಿಗೆ ಧರ್ಮಪರ್ವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಂ.ಕೆ. ಶಶಿಧರಸ್ವಾಮಿ, ಮಾತೆ ಶರಣಾಂಬಿಕೆ, ಎಚ್.ಎ.ದಿನಕರ, ಶಾಂತಲಾ ಬಿ.ಡಿ.ಭೂಕಾಂತ್ ಮತ್ತಿತರರು ಇದ್ದರು.