ಮೈಲಾರಲಿಂಗೇಶ್ವರ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಡಿಸಿ

KannadaprabhaNewsNetwork | Published : Jan 18, 2024 2:00 AM

ಸಾರಾಂಶ

ದೇವಸ್ಥಾನ ಸೇರಿದಂತೆ ಪರಿಷೆ ಸೇರುವ ಜಾಗ ಹಾಗೂ ನದಿ ತೀರದ ಪ್ರದೇಶದಲ್ಲಿ ವಿದ್ಯುತ್‌ ವ್ಯವಸ್ಥೆ ಮಾಡಬೇಕು.

ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯು ಫೆ. 16ರಿಂದ ಫೆ. 27ರ ವರೆಗೂ ಜರುಗಲಿದ್ದು, ಫೆ. 26ರಂದು ನಡೆಯುವ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ 20 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು, ತಮಗೆ ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಸೂಚಿಸಿದರು.

ತಾಲೂಕಿನ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನದ ವತಿಯಿಂದ ಅಗತ್ಯಕ್ಕೆ ತಕ್ಕಂತೆ ಕಾರ್ಮಿಕರನ್ನು ನಿಯೋಜಿಸಿ 10 ದಿನಗಳ ಕಾಲ ಸ್ವಚ್ಛತೆ ಮಾಡಬೇಕು. ಜತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದರೇ ಜಾತ್ರೆಗೆ ಬರುವ ಭಕ್ತರ ಆರೋಗ್ಯವನ್ನು ಕಾಪಾಡಲು ಸಾಧ್ಯವಿದೆ ಎಂದರು.

ಗ್ರಾಮದ ಚರಂಡಿ, ಬಸ್‌ ನಿಲ್ದಾಣ, ಜಾತ್ರೆಯ ಪರಿಷೆ ಸೇರುವ ಜಾಗ ಮತ್ತು ನದಿ ತೀರದಲ್ಲಿ ಸ್ವಚ್ಛತೆ ಮಾಡಬೇಕಿದೆ. ಭಕ್ತರಿಗೆ ಶೌಚಾಲಯ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಎಲ್ಲ ಕಡೆಗೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ವ್ಯವಸ್ಥೆ ಮಾಡಬೇಕಿದೆ. ಜಾತ್ರೆಯಲ್ಲಿ ಹಾಕಲಾಗುವ ಪ್ರತಿಯೊಂದು ಹೋಟೆಲ್‌ ಸೇರಿದಂತೆ ಎಲ್ಲ ಅಂಗಡಿಗಳ ಮಾಲೀಕರು, ಒಣ ಹಾಗೂ ಹಸಿ ಕಸ ಹಾಕಲು ಡಬ್ಬಾಗಳನ್ನು ಇಟ್ಟರೆ ಮಾತ್ರ ಗ್ರಾಪಂ ಪಿಡಿಒ ಅವರಿಗೆ ಪರವಾನಗಿ ನೀಡಬೇಕು. ಇಲ್ಲದಿದ್ದರೇ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದರು.

ಜನಾರೋಗ್ಯವನ್ನು ಕಾಪಾಡಲು 4 ಕಡೆಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ಸೇರಿದಂತೆ ಅಗತ್ಯ ಆ್ಯಂಬುಲೆನ್ಸ್‌ ಸೇವೆ ಇರಬೇಕು. ಅಗತ್ಯ ಔಷಧಿ ಮತ್ತು ಮಾತ್ರೆಗಳನ್ನು ಸಂಗ್ರಹಿಸಿಕೊಳ್ಳಬೇಕಿದೆ. ಜತೆಗೆ ವಿವಿಧ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಬೇಕೆಂದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಜಾತ್ರೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದೇವೆ. ಇದಕ್ಕೆ ಸಚಿವರು ಸಮ್ಮತಿಸಿದ್ದಾರೆಂದರು.

ದೇವಸ್ಥಾನ ಸೇರಿದಂತೆ ಪರಿಷೆ ಸೇರುವ ಜಾಗ ಹಾಗೂ ನದಿ ತೀರದ ಪ್ರದೇಶದಲ್ಲಿ ವಿದ್ಯುತ್‌ ವ್ಯವಸ್ಥೆ ಮಾಡಬೇಕು. ಯಾವ ಕಡೆಗೂ ಭಕ್ತರಿಗೆ ತೊಂದರೆ ಆಗದಂತೆ ಜೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕಿದೆ ಎಂದು ಡಿಸಿ ಎಂ.ಎಸ್‌. ದಿವಾಕರ ತಿಳಿಸಿದರು.

ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸಿಇಒ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಲೀಂ ಪಾಷ, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಚ್‌. ಗಂಗಾಧರ, ತಹಸೀಲ್ದಾರ್‌ ವಿ. ಕಾರ್ತಿಕ್‌, ದೇವಸ್ಥಾನದ ಇಒ ಕೃಷ್ಣಪ್ಪ, ತಾಪಂ ಇಒ ಜಯರಾಮ ಚವ್ಹಾಣ್‌, ಮುಖಂಡ ತೋಟಾನಾಯ್ಕ, ಎಂ. ಪರಮೇಶ್ವರಪ್ಪ, ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Share this article