ಕನ್ನಡಪ್ರಭ ವಾರ್ತೆ ಹುಣಸೂರು ಗೋಮಾಳ ಜಮೀನಿನಲ್ಲಿ ತಲೆಮಾರುಗಳಿಂದ ಬೇಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು, ತಂಬಾಕಿಗೆ ಉತ್ತಮ ದರ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಮತ್ತು ಹಸಿರುಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದ ರೈತರು, ಗೋಮಾಳ ಭೂಮಿ ರೈತರಿಗೆ ಸಿಗಲಿ, ತಂಬಾಕಿಗೆ ನ್ಯಾಯಯುತ ದರ ನೀಡಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಗಮನ ಸೆಳೆದರು.ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಎಚ್. ಮಹೇಶ್ ಮಾತನಾಡಿ, ರೈತರು ತಲತಲಾಂತರಗಳಿಂದ ಗೋಮಾಳ ಭೂಮಿಯಲ್ಲಿ ಕೃಷಿಕೈಗೊಂಡು ತಮ್ಮ ಕುಟುಂಬಗಳೊಂದಿಗೆ ಜೀವನ ನಡೆಸಿದ್ದು, ಅಂದಿನ ಕಾಲದಲ್ಲಿ ನಮ್ಮ ಪೂರ್ವಜರಿಗೆ ಇದು ಗೋಮಾಳ ಅಥವಾ ಕೃಷಿ ಜಮೀನು ಎನ್ನುವುದು ತಿಳಿದಿರಲಿಲ್ಲ. ಇದೀಗ ಸರ್ಕಾರಗಳು ಗೋಮಾಳದಲ್ಲಿ ಬೇಸಾಯ ಮಾಡುವವರಿಗೆ ಸಾಗುವಳಿ ಪತ್ರ ನೀಡಲಾಗದು ಎಂದು ತೀರ್ಮಾನಿಸಿರುವುದು ರಾಜ್ಯಾದ್ಯಂತ ಕೋಟ್ಯಾಂತರ ರೈತ ಕುಟುಂಬಗಳನ್ನು ಅತಂತ್ರ ಸ್ಥಿತಿಗೆ ತಂದಿದೆ. ಸರ್ಕಾರಗಳು ನಮೂನೆ 53ರಲ್ಲಿ ಅರ್ಜಿ ಸ್ವೀಕರಿಸಿದ್ದು, ಗೋಮಾಳದಲ್ಲಿ ಕೃಷಿ ನಡೆಸಿರುವ ರೈತರಿಗೂ ಸಾಗುವಳಿ ಪತ್ರ ನೀಡುವ ಮೂಲಕ ಅವರ ಆರ್ಥಿಕಾಭಿವೃದ್ಧಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಅನಧೀಕೃತ ತಂಬಾಕು ಬೆಳೆಗಾರರಿಗೆ ಯಾವುದೇ ದಂಡ ಶುಲ್ಕವನ್ನು ಮಂಡಳಿ ವಿಧಿಸಬಾರದು. ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಕೆಜಿಗೆ 400 ರೂ.ಗಳನ್ನು ನೀಡಿರುವಾಗ ಕರ್ನಾಟಕದಲ್ಲಿ ಮಾತ್ರ ರೂ.320ರ ಗಡಿ ದಾಟದಿರುವುದು ಏಕೆ? ಮಂಡಳಿ ಮತ್ತು ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವುದು ಖಂಡನೀಯ. ಯಾವುದೇ ಬೇಲ್‌ಗಳ ಮೇಲೆ ಸಿಆರ್ ದಾಖಲು ಮಾಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಚೇರಿ, ತಹಸೀಲ್ದಾರ್ ಯದುಗಿರೀಶ್ ರೈತರಿಂದ ಮನವಿಪತ್ರ ಸ್ವೀಕರಿಸಿದರು.ಶಿರಸ್ತೇದಾರ್ ಶ್ರೀಪಾದ್ ನಲವತ್ ವಾಡಕರ್ ಇದ್ದರು.ಪಿರಿಯಾಪಟ್ಟಣ ರೈತ ಸಂಘದ ತಾಲೂಕು ಅಧ್ಯಕ್ಷ ಅಜಿತ್, ಮುಖಂಡರಾದ ಶೇಖರ್, ರಾಮೇಗೌಡ, ಸತ್ಯಪ್ಪ, ಶಿವನಂಜಪ್ಪ, ಚಂದ್ರಪ್ಪ ಭಾಗವಹಿಸಿದ್ದರು.