ಗೋಕರ್ಣ: ಶಾಲಾ ಮಕ್ಕಳು ಜೀವಾಪಾಯದಲ್ಲಿ ರಸ್ತೆ ದಾಟುವ ಪರಿಸ್ಥಿತಿ, ಇನ್ನೊಂದೆಡೆ ಹೊಲಸು ರಾಡಿ ನೀರು ತುಳಿದು ದೇವರ ದರ್ಶನ ಪೂಜೆಗೆ ತೆರಳುವ ದೃಶ್ಯ, ಮಳೆ ಕಡಿಮೆಯಾದರೂ ಚರಂಡಿ ಸರಿಪಡಿಸದ ಸ್ಥಳೀಯ ಆಡಳಿತ...
ಇದು ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದ ಶೋಚನೀಯ ಸ್ಥಿತಿ.ಕಳೆದ ಎರಡು ದಿನದಿಂದ ಸುರಿಯುತ್ತಿದ್ದ ಮಳೆ ಸೋಮವಾರ ತುಸು ಕಡಿಮೆಯಾಗಿದೆ. ಆದರೆ ಮಳೆಗಾಲದ ಪೂರ್ವ ತಯಾರಿ ಇಲ್ಲದ ಪರಿಣಾಮ ರಸ್ತೆಯಲ್ಲಿನ ಕಲ್ಲು ಮಣ್ಣಿನ ರಾಶಿ, ಚರಂಡಿಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಅವುಗಳನ್ನು ತೆರವುಗೊಳಿಸದೆ ಗ್ರಾಪಂ ನಿರ್ಲಕ್ಷ್ಯವಹಿಸಿದ್ದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಗಾಯತ್ರಿ ಕೆರೆಯ ಮೇಲ್ಭಾಗದ ಗುಡ್ಡದ ನೀರು ಈ ಮೊದಲು ಹೋಗುವ ಜಾಗವನ್ನು ಮುಚ್ಚಿದ ಪರಿಣಾಮ ಮಹಾಗಣಪತಿ ಮಂದಿರದ ಮುಂಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಹರಿದು ಬಂದು ರಥಬೀದಿಯಲ್ಲಿ ನೀರು ತುಂಬಿತ್ತು. ಆನಂತರ ತೇಲಿ ಬಂದ ತ್ಯಾಜ್ಯಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು. ಇದನ್ನು ಸ್ವಚ್ಛಗೊಳಿಸದೆ ಬಿಡಲಾಗಿದೆ. ಇನ್ನೂ ಭದ್ರಕಾಳಿ ಕಾಲೇಜಿನ ಎದುರಿನಲ್ಲಿ ರಾಜ್ಯ ಹೆದ್ದಾರಿ 143ರ ಚರಂಡಿ ಅರೆಬರೆ ಸ್ವಚ್ಛಗೊಳಿಸಿ ಬಿಟ್ಟಿದ್ದು, ಖಾಸಗಿಯವರು ಗುಡ್ಡ ಕಡಿದು ಹಾಕಿದ ರಾಡಿ ಮಣ್ಣು ರಸ್ತೆಯಲ್ಲಿ ತುಂಬಿದ್ದು, ಶರವೇಗದಲ್ಲಿ ಬರುವ ವಾಹನ ತಪ್ಪಿಸಿಕೊಂಡು ವಿದ್ಯಾರ್ಥಿಗಳು ಹರಸಾಹಸ ಮಾಡಿ ತೆರಳುತ್ತಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮತೆಗೆದುಕೊಂಡಿಲ್ಲ ಎಂದು ಜನರು ಹೇಳುತ್ತಿದ್ದು, ಅವಘಡ ಸಂಭವಿಸಿದರೆ ಇಲಾಖೆಯ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.
ಅದರಂತೆ ಮುಖ್ಯ ಕಡಲತೀರದ ರಸ್ತೆ, ಮೀನು ಮಾರುಕಟ್ಟೆ ರಸ್ತೆ, ಗಂಜೀಗದ್ದೆ ಪ್ರದೇಶದಲ್ಲಿ ನೀರು ತುಂಬಿ ಕಸ ಕಡ್ಡಿ ರಾಶಿ ಬಿದ್ದಿದೆ. ಮಳೆಯ ಪ್ರಾರಂಭದಲ್ಲಿ ಈ ಆವಾಂತರವಾದರೆ ಮುಂದಿನ ದಿನದಲ್ಲಿ ಪರಿಸ್ಥಿತಿ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.ತ್ಯಾಜ್ಯ ನೀರು ಬಿಡುವ ದುರುಳರು: ಚರಂಡಿ ನೀರು ತುಂಬಿ ರಸ್ತೆ ಜಲಾವೃತಗೊಂಡಾಗ ಕೆಲವು ಹೋಟೆಲ್, ವಸತಿ ಗೃಹದವರು ನೇರವಾಗಿ ಶೌಚ, ಸ್ನಾನಗೃಹದ ನೀರನ್ನು ಬಿಡುತ್ತಿದ್ದು, ಪ್ರವಾಸಿಗರು ಸ್ಥಳೀಯರು ತಿಳಿಯದೇ ಹೊಲಸ ನೀರು ತುಳಿದೇ ಸಾಗಬೇಕಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.