ಗುಂಡ್ಲುಪೇಟೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಶಾಲಾ ವಾಹನಕ್ಕೆ ಸಿಲುಕಿ ಬಾಲಕಿ ದುರ್ಮರಣ

KannadaprabhaNewsNetwork |  
Published : Nov 22, 2024, 01:16 AM IST
ಅನ್ವಿತಾ | Kannada Prabha

ಸಾರಾಂಶ

ಶಾಲಾ ವಾಹನಕ್ಕೆ ಸಿಲುಕಿ ನಾಲ್ಕು ವರ್ಷದ ಬಾಲಕಿ ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಉಡಿಗಾಲದಲ್ಲಿ ಗುರುವಾರ ಸಂಜೆ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಕೋಡಸೋಗೆ ಗ್ರಾಮದ ನಿವಾಸಿ ಶಾಂತಪ್ಪ ಮಗಳು ಅನ್ವಿತಾ (೪ ವರ್ಷ) ಶಾಲಾ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಬಾಲಕಿ.

ಚಾಲಕನ ನಿರ್ಲಕ್ಷ್ಯದಿಂದ ಬಾಲಕಿ ಸಾವು । ಶಾಲೆಯ ವಿರುದ್ಧ ಪೋಷಕರು, ಗ್ರಾಮಸ್ಥರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಶಾಲಾ ವಾಹನಕ್ಕೆ ಸಿಲುಕಿ ನಾಲ್ಕು ವರ್ಷದ ಬಾಲಕಿ ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಉಡಿಗಾಲದಲ್ಲಿ ಗುರುವಾರ ಸಂಜೆ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕೋಡಸೋಗೆ ಗ್ರಾಮದ ನಿವಾಸಿ ಶಾಂತಪ್ಪ ಮಗಳು ಅನ್ವಿತಾ (೪ ವರ್ಷ) ಶಾಲಾ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಬಾಲಕಿ. ಉಡಿಗಾಲದಲ್ಲಿರುವ ಚಂದನ ಕಾನ್ಟೆಂಟ್‌ಗೆ ಸೇರಿದ ಶಾಲಾ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಒಂದು ಅಮೂಲ್ಯ ಜೀವ ಅಸುನೀಗಿದೆ. ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ವಿವರ:

ಕೋಡಸೋಗೆ ಶಾಂತಪ್ಪ ಅವರ ನಾಲ್ಕು ವರ್ಷದ ಅನ್ವಿತಾ ದೊಡ್ಡಪ್ಪನ ಮನೆ ಉಡಿಗಾಲದಲ್ಲಿ ಇದ್ದು, ಅಲ್ಲೇ ಇರುವ ಚಂದನ ಕಾನ್ವೆಂಟ್‌ನಲ್ಲಿ ಪ್ರಿ ಕೆಜಿಗೆ ದಾಖಲಾಗಿದ್ದಳು. ಪ್ರತಿ ದಿನ ಮನೆಯಿಂದ ಶಾಲೆ ವಾಹನದಲ್ಲಿ ಹೋಗಿ ಬರುತ್ತಿದ್ದಳು. ಎಂದಿನಂತೆ ಚಾಲಕ ಮಗುವನ್ನು ಮನೆ ಮುಂದೆ ವಾಹನ ನಿಲ್ಲಿಸಿ, ಇಳಿಸಿದ್ದಾನೆ. ವಾಹನದಲ್ಲಿ ಚಾಲಕ ಹೊರತು ಪಡಿಸಿ, ಸಹಾಯಕ ಇರಲಿಲ್ಲ. ಹೀಗಾಗಿ ಬಾಲಕಿ ಬಸ್‌ನಿಂದಿಳಿದ ಹಿಂಬದಿ ನಿಂತಿದ್ದಾಳೆ. ಇದನ್ನು ಗಮನಿಸದ ಚಾಲಕ ವಾಹನವನ್ನು ಹಿಂಬದಿ ಚಾಲನೆ ಮಾಡುವ ಸಂದರ್ಭದಲ್ಲಿ ಬಾಲಕಿಗೆ ಡಿಕ್ಕಿ ಹೊಡೆದು ಹಿಂಬದಿ ಚಕ್ರ ತಲೆ ಮೇಲೆ ಹರಿದು ಸ್ಥಳದಲ್ಲಿಯೇ ಮಗು ದಾರುಣ ಸಾವನ್ನಪ್ಪಿದೆ.

ಆಡಳಿತ ಮಂಡಳಿಯ ನಿರ್ಲಕ್ಷ್ಯ ಆರೋಪ:

ಶಾಲೆಯ ವಾಹನವು ಮೋಟಾರ್ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಟನೆ ಮಾಡಿರುವುದು ಕಂಡು ಬಂದಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎನ್ನಲಾಗಿದೆ. ಶಾಲಾ ವಾಹನದಲ್ಲಿ ಸಹಾಯಕ ಇಲ್ಲದಿರುವುದು ಪ್ರಮುಖ ಪ್ರಮಾದವಾಗಿದೆ. ಅಲ್ಲದೇ ಪುಟ್ಟ ಮಕ್ಕಳನ್ನು ಬಸ್ ಹತ್ತಿಸಿ ಹಾಗೂ ಇಳಿಸಿ ಅವರ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಡುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಆದರೆ, ಇಲ್ಲಿ ಯಾವುದೇ ಸುರಕ್ಷತೆ ಕ್ರಮವನ್ನು ಪಾಲನೆ ಮಾಡಿಲ್ಲ. ಚಾಲಕನಿಗೂ ಸಹ ಅನುಭವ ಕೊರತೆ ಎದ್ದು ಕಾಣುತ್ತಿರುವುದು ಈ ಘಟನೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಶಾಲೆಯ ಆಡಳಿತ ಮಂಡಳಿ ವಿರುದ್ದ ಸ್ಥಳದಲ್ಲಿಯೇ ಬಾಲಕಿಯ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಾಲೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಚಂದನ ಕಾನ್ವೆಂಟ್ ಸೇರಿದಂತೆ ಅನೇಕ ಖಾಸಗಿ ವಿದ್ಯಾ ಸಂಸ್ಥೆಗಳು ಶಾಲಾ ವಾಹನಗಳನ್ನು ಹೊಂದಿದ್ದು ಯಾವುದೇ ರೀತಿ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ಇಂಥ ಆವಘಡಗಳು ನಡೆಯುತ್ತಿವೆ ಎಂದು ದೂರಲಾಗಿದೆ.

ಸಂಬಂಧ ಪಟ್ಟ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ, ಇಂಥ ವಾಹನಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಅನುಭವಿ ಚಾಲಕ, ಸಹಾಯಕ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಮೋಟಾರ್ ವಾಹನಗಳ ಸುರಕ್ಷತೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಪೋಷಕರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ