ಜಿ.ಸೋಮಶೇಖರ
ರಥೋತ್ಸವಗಳಿಗೆ ಸಾಮಾನ್ಯವಾಗಿ ಬಾಳೆಹಣ್ಣು, ಉತ್ತತ್ತಿಗಳನ್ನು ತೂರುತ್ತಾರೆ. ಆದರೆ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ದ ಕೊಟ್ಟೂರಿನಲ್ಲಿ ಇಂತಹ ವಿಶಿಷ್ಟ ಸಂಪ್ರದಾಯ ಪ್ರತಿ ವರ್ಷ ಜರುಗಲಿದೆ.
ಬಿಕ್ಕಿ ಮರಡಿ ದುರುಗಮ್ಮದೇವಿ ರಥೋತ್ಸವದಲ್ಲಿ ಪ್ರತಿವರ್ಷ ಭಕ್ತರು ತೂರುವ ಕೋಳಿಗಳನ್ನು ಸಿಕ್ಕವರು ಖಂಡಿತ ಹತ್ಯೆ ಗೈಯುವುದಿಲ್ಲ. ಬದಲಾಗಿ ಮನೆಗೆ ತೆಗೆದುಕೊಂಡು ಹೋಗಿ ಸಾಕಿ ಮುಂದಿನ ವರ್ಷಕ್ಕೆ ಜರುಗುವ ರಥೋತ್ಸವಕ್ಕೆ ಈ ಕೋಳಿಗಳನ್ನು ತೂರುವುದು ವಾಡಿಕೆ.ಎಲ್ಲಿದೆ?: ಕೊಟ್ಟೂರಿನ ಕೆರೆಯ ದಿಬ್ಬದ ಮೇಲೆ ಈ ಬಿಕ್ಕಿ ಮರಡಿ ದುರುಗಮ್ಮದೇವಿಯ ಗುಡಿ ಇದೆ. ಗುಡಿಯ ಹಿಂಭಾಗದಲ್ಲಿನ ಹೊಲ ಪ್ರದೇಶಗಳಲ್ಲಿ ರಥೋತ್ಸವ ನಡೆಯುತ್ತಿತ್ತು. ಕೊಟ್ಟೂರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದುರುಗಮ್ಮದೇವಿಯ ರಥಕ್ಕೆ ಜಾಲನೆ ದೊರಕುತ್ತಿದ್ದಂತೆ ಹರಕೆ ಹೊತ್ತ ಭಕ್ತರು ರಥದ ಮೇಲೆ ಜೀವಂತ ಕೋಳಿಗಳನ್ನು ತೂರುತ್ತಾರೆ.
ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಅಪರೂಪದ ರಥೋತ್ಸವ ಬಿಕ್ಕಿಮರಡಿ ದುರುಗಮ್ಮ ದೇವಿ ರಥೋತ್ಸವವಾಗಿದೆ. ಇದನ್ನು ನೋಡಲೆಂದೇ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ ಎನ್ನುತ್ತಾರೆ ಭಕ್ತ ಚಂದ್ರಶೇಖರ ಜಗಳೂರು.