ಕಲಬುರಗಿ: ಮಾವಂದಿರ ಪ್ರಭಾವದಲ್ಲಿ ಅಳಿಯಂದಿರ ಹವಾ!

KannadaprabhaNewsNetwork | Updated : Apr 08 2024, 08:06 AM IST

ಸಾರಾಂಶ

‘ಮಾವನ ಪ್ರಭಾವ-ನೆರಳಲ್ಲಿ ಅಳಿಯನ ಸ್ಪರ್ಧೆ’, ಕಲಬುರಗಿ ಲೋಕ ಸಮರದ ಕದನ ಕಣಕ್ಕೆ ಹೊಸತೇನಲ್ಲ. ಇಲ್ಲಿ 1980ರ ದಶಕದಿಂದಲೇ ಕಾಂಗ್ರೆಸ್‌ ಘಟಾನುಘಟಿಗಳ ಅಳಿಯಂದಿರ ಅಬ್ಬರ ಶುರುವಾಗಿದೆ.

ಶೇಷಮೂರ್ತಿ ಅವಧಾನಿ

  ಕಲಬುರಗಿ :  ‘ಮಾವನ ಪ್ರಭಾವ-ನೆರಳಲ್ಲಿ ಅಳಿಯನ ಸ್ಪರ್ಧೆ’, ಕಲಬುರಗಿ ಲೋಕ ಸಮರದ ಕದನ ಕಣಕ್ಕೆ ಹೊಸತೇನಲ್ಲ. ಇಲ್ಲಿ 1980ರ ದಶಕದಿಂದಲೇ ಕಾಂಗ್ರೆಸ್‌ ಘಟಾನುಘಟಿಗಳ ಅಳಿಯಂದಿರ ಅಬ್ಬರ ಶುರುವಾಗಿದೆ.

ಕಲಬುರಗಿ ಲೋಕಸಭೆಯ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಕಾಂಗ್ರೆಸ್ಸಿನ ಪ್ರಭಾವಿ ನಾಯಕರ ಅಳಿಯಂದಿರಿಗೂ ಕಲಬುರಗಿ ಲೋಕಸಭೆ ಅಖಾಡಕ್ಕೂ ತುಂಬ ಹತ್ತಿರದ ನಂಟಿರೋದು ಸ್ಪಷ್ಟವಾಗುತ್ತದೆ.

9ನೇ ಲೋಕಸಭೆ (1984- 80) ಸದಸ್ಯರಾಗಿದ್ದ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ವೀರೇಂದ್ರ ಪಾಟೀಲರು ನಂತರ ಅಳಿಯ, ಇಎನ್‌ಟಿ ಸರ್ಜನ್‌ ಡಾ.ಬಿ.ಜಿ. ಜವಳಿಯವರನ್ನು ಈ ಕ್ಷೇತ್ರಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ ಬಿಂಬಿಸಿದರು.

ಮಾವನ ನೆರಳಲ್ಲಿಯೇ ಕಲಬುರಗಿ ಕಣದಲ್ಲಿದ್ದ ಡಾ.ಬಿ.ಜಿ. ಜವಳಿ ತಾವು ಎದುರಿಸಿದ್ದ 3 ಚುನಾವಣೆಗಳಲ್ಲಿ 1989, 1991ರಲ್ಲಿ ಗೆದ್ದರೆ, 1998ರಲ್ಲಿ ಪರಾಭವಗೊಂಡರು. ವೀರೇಂದ್ರ ಪಾಟೀಲರ ಪುತ್ರಿಯನ್ನು ಮದುವೆಯಾಗಿದ್ದ ಡಾ. ಜವಳಿ ಕಲಬುರಗಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದವರು. ಅಳಿಯನ ಬಗ್ಗೆ ವಿರೇಂದ್ರ ಪಾಟೀಲರು ತೋರಿದ ವ್ಯಾಮೋಹವೇ ಅವರನ್ನು 2 ಬಾರಿ ಸಂಸದರನ್ನಾಗಿಸಿತ್ತು ಎಂಬುದು ಗುಟ್ಟೇನಲ್ಲ.

1997 ಮಾರ್ಚ್‌ 14 ರಂದು ವೀರೇಂದ್ರ ಪಾಟೀಲರು ನಿಧನರಾದರು, ನಂತರ, 1998ರಲ್ಲಿ ನಡೆದ ಲೋಕ ಸಮರದಲ್ಲಿ ಪುನಃ ಕಾಂಗ್ರೆಸ್‌ ಪಕ್ಷ ಡಾ. ಬಿ.ಜಿ. ಜ‍ವಳಿಯವರಿಗೆ 3 ನೇ ಬಾರಿಗೆ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿತಾದರೂ ಗೆಲುವಾಗಲಿಲ್ಲ. ನಂತರ ಜವಳಿ ಲೋಕಸಭೆಯ ರಾಜಕಾರಣದತ್ತ ಸುಳಿಯಲೂ ಇಲ್ಲ. 

ಈಗ ಖರ್ಗೆ ಅಳಿಯನಿಗೆ ಮಣೆ:

ಇದೀಗ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರ ಹಿರಿಯ ಪುತ್ರಿ ಡಾ. ಜಯಶ್ರೀಯವರ ಪತಿ ಹಾಗೂ ಖರ್ಗೆಯವರ ಧರ್ಮಪತ್ನಿ ರಾಧಾಬಾಯಿಯವರ ಸಹೋದರ ರಾಧಾಕೃಷ್ಣ ಅವರನ್ನು ಕಾಂಗ್ರೆಸ್‌ ಈ ಬಾರಿ ಅಖಾಡಕ್ಕಿಳಿಸಿ ಮಾವ- ಅಳಿಯನ ದಾಳ ಉರುಳಿಸಿ ಬಿಜೆಪಿಗೆ ಸಡ್ಡು ಹೊಡೆದಿದೆ.

ಯಶಸ್ವಿ ಉದ್ಯಮಿ, ಶೈಕ್ಷಣಿಕವಾಗಿ ಅನೇಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ, ತೆರೆಮರೆಯಲ್ಲಿದ್ದೇ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ತಮ್ಮದೇ ಆದಂತಹ ಕೊಡುಗೆ ನೀಡಿರುವ ಖರ್ಗೆ ಅಳಿಯ ರಾಧಾಕೃಷ್ಣ, ಇದೀಗ ಕಮಲ ಪಡೆಯ ವಿರುದ್ಧ ಕಣಕ್ಕಿಳಿದು ಇಲ್ಲಿ ಯುದ್ಧ ಸಾರಿದ್ದಾರೆ.

ಡಾ.ಬಿ.ಜಿ. ಜವಳಿ, ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಳಂದ ತಾಲೂಕಿನ ಜವಳಿ ಗ್ರಾಮದವರು. ರಾಧಾಕೃಷ್ಣ ದೊಡ್ಮನಿ, ಕಲಬುರಗಿ ಲೋಕಸಭೆ ವ್ಯಾಪ್ತಿಯ ಚಿತ್ತಾಪೂರ ಮತಕ್ಷೇತ್ರದಡಿಯಲ್ಲಿರುವ ಗುಂಡಗುರ್ತಿ ಊರಿನವರು.

Share this article