ಲೋಕಸಮರ ಅಭ್ಯರ್ಥಿಗಳ ಟೆಂಪಲ್ ರನ್

KannadaprabhaNewsNetwork | Published : Apr 8, 2024 1:00 AM

ಸಾರಾಂಶ

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ಇಬ್ಬರೂ ದೇಗುಲ ಹಾಗೂ ಮಠಗಳಿಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದಾರೆ.

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಪ್ರಚಾರದ ನಡುವೆ ದೇವರು ಹಾಗೂ ವಿವಿಧ ಮಠಗಳ ಮೊರೆ ಹೋಗುತ್ತಿದ್ದಾರೆ.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ಇಬ್ಬರೂ ದೇಗುಲ ಹಾಗೂ ಮಠಗಳಿಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದಾರೆ.

ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳು, ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು, ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳು, ಗವಿಪುರಂನಲ್ಲಿರುವ ಮಂಜುನಾಥ ಶ್ರೀಗಳು ಮತ್ತಿತರ ಶ್ರೀಗಳನ್ನು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಇಬ್ಬರೂ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡುವ ಉದ್ದೇಶದ ಹಿಂದೆ ಹಾಲಕ್ಕಿ ಒಕ್ಕಲಿಗರು ಹಾಗೂ ಗ್ರಾಮ ಒಕ್ಕಲಿಗರ ಮೇಲೆ ಪ್ರಭಾವ ಬೀರಬಹುದು ಎಂಬ ಉದ್ದೇಶ ಇದೆ. ರಾಘವೇಶ್ವರ ಶ್ರೀಗಳು ಹಾಗೂ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ಭೇಟಿಯ ಹಿಂದೆ ಹವ್ಯಕ ಬ್ರಾಹ್ಮಣ ಸಮಾಜದವರ ಓಲೈಕೆ ಇದೆ. ಮಂಜುನಾಥ ಶ್ರೀಗಳ ಭೇಟಿಯ ಹಿಂದೆ ಮರಾಠಾ ಸಮಾಜದ ಮೇಲೆ ಪ್ರಭಾವ ಬೀರಬಹುದು ಎಂಬ ಭಾವನೆ ಇದೆ. ಹೀಗೆ ಮಠಾಧೀಶರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆಯುವ ಮೂಲಕ ಪರೋಕ್ಷವಾಗಿ ಆ ಮಠಗಳಿಗೆ ನಡೆದುಕೊಳ್ಳುವ ಸಮಾಜದ ಓಲೈಕೆ ಇದೆ. ಎಲ್ಲ ಶ್ರೀಗಳು ಪಕ್ಷಾತೀತವಾಗಿದ್ದು, ತಮ್ಮಲ್ಲಿಗೆ ಬಂದ ಇಬ್ಬರೂ ಅಭ್ಯರ್ಥಿಗಳನ್ನು ಆಶೀರ್ವದಿಸಿದ್ದಾರೆ. ಆದರೆ ಇಬ್ಬರೂ ಅಭ್ಯರ್ಥಿಗಳು ಈ ಎಲ್ಲ ಮಠಾಧೀಶರನ್ನು ಭೇಟಿಯಾಗಿರುವುದರಿಂದ ಇದರ ಪರಿಣಾಮ ಏನಾಗಲಿದೆ ಎನ್ನುವ ಕುತೂಹಲವೂ ಉಂಟಾಗಿದೆ.

ಪ್ರಚಾರಕ್ಕೆ ಹೋದಲ್ಲೆಲ್ಲ ಯಾವ್ಯಾವ ದೇವಾಲಯಗಳು ಸಿಗಲಿದೆಯೋ ಆ ಎಲ್ಲ ದೇವರಿಗೂ ಸುತ್ತು ಹಾಕುತ್ತಿದ್ದಾರೆ. ಎರಡೂ ಅಭ್ಯರ್ಥಿಗಳು ಜಿಲ್ಲೆಯ ಪ್ರಮುಖ ದೇಗುಲಗಳಿಗೆ ಈಗಾಗಲೆ ಭೇಟಿ ನೀಡಿದ್ದಾರೆ. ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದಾರೆ. ವಿವಿಧ ಸಮಾಜಗಳ ಮುಖಂಡರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ. ಮತ ಪಡೆಯಲು ಏನೆಲ್ಲ ಕಸರತ್ತುಗಳನ್ನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ.

ಚುನಾವಣೆ ಘೋಷಣೆಯಾದ ತರುವಾಯ ಜಿಲ್ಲೆಗೆ ಯಾವುದೆ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ಭಾಗಿಯಾಗಿಲ್ಲ. ಉತ್ತರ ಕನ್ನಡ ಕ್ಷೇತ್ರದಲ್ಲಿ ಎರಡನೇ ಹಂತದ ಚುನಾವಣೆ ನಡೆಯುವುದರಿಂದ ಮೊದಲ ಹಂತದ ಕ್ಷೇತ್ರಗಳಲ್ಲಿ ಪ್ರಚಾರ ಮುಗಿದ ತರುವಾಯ ರಾಷ್ಟ್ರೀಯ ನಾಯಕರು ಈ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಚಾರ ಕಾರ್ಯದಲ್ಲೂ ಮರಾಠರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಯಾರನ್ನು ಕರೆತರಬೇಕು, ಕರಾವಳಿಯಲ್ಲಿ ಯಾವ ನಾಯಕರನ್ನು ಕರೆಸಬೇಕು, ಘಟ್ಟದ ಮೇಲಿನ ತಾಲೂಕುಗಳಲ್ಲಿ ಯಾರು ಬಂದರೆ ಅನುಕೂಲ ಎಂದು ಎರಡೂ ಪಕ್ಷಗಳ ಅಭ್ಯರ್ಥಿಗಳು ಲೆಕ್ಕ ಹಾಕುತ್ತಿದ್ದಾರೆ.

Share this article