ಮತದಾನ ಪ್ರಕ್ರಿಯೆ ಕ್ರಮಬದ್ಧ ಆಗಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork | Published : Apr 8, 2024 1:00 AM

ಸಾರಾಂಶ

ಮತಗಟ್ಟೆಗಳಲ್ಲಿ ನಡೆಯುವ ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು. ಈ ಬಗ್ಗೆ ಮತಗಟ್ಟೆ ಅಧ್ಯಕ್ಷ ಹಾಗೂ ಸಹಾಯಕ ಅಧ್ಯಕ್ಷರು ಎಚ್ಚರ ವಹಿಸಬೇಕು. ತರಬೇತಿ ಅವಧಿಯಲ್ಲಿ ಯಾವುದೇ ಸಂಶಯ ಅಥವಾ ಗೊಂದಲಗಳು ಇದ್ದಲ್ಲಿ ಮತಗಟ್ಟೆ ಸಿಬ್ಬಂದಿ ಮಾಸ್ಟರ್ ತರಬೇತಿದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಲೋಕಸಭಾ ಚುನಾವಣೆ ವೇಳೆ ನಡೆಯುವ ಮತದಾನ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಸುವಲ್ಲಿ ಮತಗಟ್ಟೆಗಳ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.

ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಭಾನುವಾರ ಲೋಕಸಭಾ ಚುನಾವಣೆ ಪ್ರಯುಕ್ತ ಮತಗಟ್ಟೆ ಅಧಿಕಾರಿಗಳಿಗೆ ನಡೆಯುತ್ತಿರುವ ಮೊದಲನೇ ಹಂತದ ತರಬೇತಿ ಶಿಬಿರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.

ಮತಗಟ್ಟೆಗಳಲ್ಲಿ ನಡೆಯುವ ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು. ಈ ಬಗ್ಗೆ ಮತಗಟ್ಟೆ ಅಧ್ಯಕ್ಷ ಹಾಗೂ ಸಹಾಯಕ ಅಧ್ಯಕ್ಷರು ಎಚ್ಚರ ವಹಿಸಬೇಕು. ತರಬೇತಿ ಅವಧಿಯಲ್ಲಿ ಯಾವುದೇ ಸಂಶಯ ಅಥವಾ ಗೊಂದಲಗಳು ಇದ್ದಲ್ಲಿ ಮತಗಟ್ಟೆ ಸಿಬ್ಬಂದಿ ಮಾಸ್ಟರ್ ತರಬೇತಿದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

ಮತಗಟ್ಟೆ ಅಥವಾ ಸಹಾಯಕ ಮತಗಟ್ಟೆ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಗಾಗಿ ಇರುವ ಮಾಹಿತಿ ಪುಸ್ತಕವನ್ನು ಪಡೆದುಕೊಂಡು ಹಲವಾರು ಬಾರಿ ಅಧ್ಯಯನ ನಡೆಸಬೇಕು. ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಎಚ್.ಕೆ.ವೀರಣ್ಣ ಗೌಡ ಕಾಲೇಜಿನ ಒಟ್ಟು 16 ಕೊಠಡಿಗಳಲ್ಲಿ ತರಬೇತಿ ಶಿಬಿರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಕೊಠಡಿಗೆ ಒಬ್ಬ ಮಾಸ್ಟರ್ ತರಬೇತಿದಾರರು ಹಾಗೂ ಒಬ್ಬರು ಸೆಕ್ಟರ್ ಅಧಿಕಾರಿಗಳು ಮೊದಲ ಹಂತದಲ್ಲಿ ಮತದಾನದ ಪ್ರಕ್ರಿಯೆ ಮತ್ತು ನಮೂನೆಗಳ ಭರ್ತಿ ಬಗ್ಗೆ ಸವಿಸ್ತಾರವಾಗಿ ತರಬೇತಿ ನೀಡಿದರು.

ಭೋಜನದ ವಿರಾಮದ ನಂತರ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷತೆ ಕುರಿತು ಚಟುವಟಿಕೆ ಕಾರ್ಯಕ್ರಮ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿ ಡಾ. ಕುಮಾರ್, ಕಾಲೇಜು ಆವರಣದಲ್ಲಿ ಇರುವ ವಿದ್ಯುನ್ಮಾನ ಮತಯಂತ್ರಗಳ ದಾಸ್ತಾನು ಕೊಠಡಿಯ ಭದ್ರತಾ ವ್ಯವಸ್ಥೆ ಕುರಿತು ಖುದ್ದು ಪರಿಶೀಲನೆ ನಡೆಸಿದರು. ಸಹಾಯಕ ಚುನಾವಣಾಧಿಕಾರಿ ಆರ್. ಲೋಕನಾಥ್, ತಹಸೀಲ್ದಾರ್ ಕೆ .ಎಸ್. ಸೋಮಶೇಖರ್, ಚುನಾವಣಾ ಶಾಖೆ ಶಿರಸ್ತೇದಾರ್ ರೂಪ, ಸೆಕ್ಟರ್ ಅಧಿಕಾರಿಗಳು, ಮಾಸ್ಟರ್ ತರಬೇತಿದಾರರು ಹಾಜರಿದ್ದರು.

ಚುನಾವಣಾ ತರಬೇತಿ ಗೈರಾದವರಿಗೆ

ನೋಟಿಸ್ ಜಾರಿ ಡೀಸಿ ಆದೇಶ

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಭಾನುವಾರ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿ (ಪಿಆರ್ ಒ ಮತ್ತು ಎಪಿಆರ್ ಒ ) ಗಳಿಗೆ ಮೊದಲ ಹಂತದ ತರಬೇತಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಯೋಜಿಸಲಾಗಿತ್ತು. ತರಬೇತಿಗೆ ಗೈರಾದ 51 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ‌. ಇನ್ನು 5 ದಿನದೊಳಗಾಗಿ ಗೈರು ಹಾಜರಾದವರ ವಿರುದ್ಧ ಆರ್.ಪಿ ಆಕ್ಟ್ ಪ್ರಜಾ ಪ್ರತಿನಿಧ್ಯ ಕಾಯ್ದೆ1951 ಕಲಾಂ 134 ರಂತೆ ಕಾನೂನು ರೀತ್ಯ ಶಿಸ್ತು ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share this article