ಮೆಟ್ರೋದಲ್ಲಿ ತಿಂಗಳಿಗೆ2 ಕೋಟಿ ಜನ ಸಂಚಾರ

KannadaprabhaNewsNetwork | Published : Jan 11, 2024 1:30 AM

ಸಾರಾಂಶ

ನಮ್ಮ ಮೆಟ್ರೋದಲ್ಲಿ ಪ್ರತಿ ತಿಂಗಳ ಪ್ರಯಾಣಿಕರ ಸಂಖ್ಯೆ 2 ಕೋಟಿಗೆ ಹೆಚ್ಚಿದೆ, ಅಲ್ಲದೆ 55 ಕೋಟಿ ಆದಾಯ ಬರುತ್ತಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಮಾಸಿಕ 2 ಕೋಟಿಗಿಂತ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದು, ₹55 ಕೋಟಿ ಆದಾಯ ಗಳಿಸಿ ಸಾಧನೆ ಮಾಡಿದೆ. ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 6.88 ಲಕ್ಷ ತಲುಪಿದ್ದು, 2023ರ ಜನವರಿಗೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ.

2023ರ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗ ಪೂರ್ಣಗೊಂಡಿದ್ದರೂ ಎರಡು ತಿಂಗಳ ಕಾಲ ಹೇಳಿಕೊಳ್ಳುವಂತಹ ಆದಾಯ ಬಿಎಂಆರ್‌ಸಿಎಲ್‌ಗೆ ಬಂದಿರಲಿಲ್ಲ. ಪ್ರಸ್ತುತ ಕೂಡ ನಮ್ಮ ಮೆಟ್ರೋ ನಿರೀಕ್ಷೆಯಂತೆ ಪ್ರತಿದಿನ 7 ಲಕ್ಷ ಸರಾಸರಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಆದರೆ, ಕ್ರಿಸ್ಮಸ್‌, ಹೊಸ ವರ್ಷ ಕಾರಣದಿಂದ ಡಿಸೆಂಬರ್‌ನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ಒಟ್ಟು 2,13,34,076 ಜನ ಮೆಟ್ರೋ ಬಳಸಿದ್ದು ಈವರೆಗಿನ (ನವೆಂಬರ್‌ 1,99,21,460 ಜನರ ಸಂಚಾರ) ದಾಖಲೆಯಾಗಿದೆ. ಸರಾಸರಿ ದಿನಕ್ಕೆ 6,88,196 ಪ್ರಯಾಣಿಕರು ಸಂಚರಿಸಿದ್ದಾರೆ. ಡಿ.31ರಂದು ನಮ್ಮ‌ ಮೆಟ್ರೋದಲ್ಲಿ 6. 26 ಲಕ್ಷ ಜನ ಸಂಚರಿಸಿದ್ದು, ಅಂದು ಬಂದೇ ದಿನ ಬರೊಬ್ಬರಿ ₹1.64 ಕೋಟಿ ಆದಾಯ ಬಂದಿತ್ತು ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಜನವರಿಯಲ್ಲಿ ದೈನಂದಿನ ಸಂಚಾರ ಸರಾಸರಿ 7 ಲಕ್ಷ ತಲುಪುವ ಸಾಧ್ಯತೆಯಿದೆ.

ಕಳೆದ ವರ್ಷ ಜನವರಿಯಲ್ಲಿ ಮಾಸಿಕ ಸರಾಸರಿ ಪ್ರಯಾಣಿಕರ ಸಂಖ್ಯೆ 5.30 ಲಕ್ಷವಿತ್ತು. ಇದರೀಗ 64 ಸಾವಿರದಷ್ಟು ಹೆಚ್ಚಿನ ಜನತೆ ಪ್ರತಿದಿನ ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗ ಬೈಯಪ್ಪನಹಳ್ಳಿ-ಕೆ.ಆರ್‌.ಪುರ (2.1 ಕಿ.ಮೀ.), ಕೆಂಗೇರಿ-ಚಲ್ಲಘಟ್ಟ (2.05 ಕಿ.ಮೀ.) ವಿಸ್ತರಣೆಗೊಂಡು ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿದಾಗ 75 ಸಾವಿರದಿಂದ 1 ಲಕ್ಷ ಪ್ರಯಾಣಿಕರು ಹೆಚ್ಚುವ ನಿರೀಕ್ಷೆಯಿತ್ತು. ಆದರೆ, ಬೋಗಿಗಳ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

Share this article