ಕನ್ನಡಪ್ರಭ ವಾರ್ತೆ ನಂಜನಗೂಡು
ಗೃಹಬಳಕೆಯ ಎಲ್.ಪಿಜಿ ಪಡೆಯುವ ಸಲುವಾಗಿ ಸುಮಾರು 15 ರಿಂದ 20 ದಿನಗಳ ಮುಂಚೆಯೇ ಬುಕ್ ಮಾಡಿದ್ದರೂ ಸಹ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ಲಭ್ಯವಾಗುತ್ತಿಲ್ಲ, ಗ್ರಾಮೀಣ ಪ್ರದೇಶದ ಜನರಿಗಂತೂ ಸಿಲಿಂಡರ್ ಸಿಗದೆ ಪರದಾಡುತ್ತಿದ್ದಾರೆ, ಪಟ್ಟಣ ಪ್ರದೇಶದಲ್ಲೂ ಸಹ ಗ್ಯಾಸ್ ಸಿಲಿಂಡರ್ ಕೊರತೆ ಹೆಚ್ಚಾಗಿದೆ, ಇದರಿಂದ ನಗರ ಪ್ರದೇಶದ ನೌಕರರು ಮತ್ತು, ಕೂಲಿ ಕಾರ್ಮಿಕರು ಸಿಲಿಂಡರ್ ಪಡೆಯುವ ಸಲುವಾಗಿಯೇ ರಜೆಯನ್ನು ಹಾಕಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ರಜೆ ಹಾಕಿ ಸಾಲುಗಟ್ಟಿ ನಿಂತಿದ್ದರೂ ಸಹ ಗ್ಯಾಸ್ ಸಿಲಿಂಡರ್ ಲಭ್ಯವಾಗುತ್ತಿಲ್ಲ.
ಗ್ರಾಮೀಣ ಪ್ರದೇಶದ ರೈತರು ಮತ್ತು ಕೂಲಿಕಾರ್ಮಿಕರು ಒಂದು ದಿನದ ಕೂಲಿಯನ್ನು ಬಿಡುವ ಜೊತೆಗೆ ಖಾಲಿ ಸಿಲಿಂಡರ್ ಸಾಗಿಸಲು ಆಟೋ ಟೆಂಪೋಗಳಿಗೆ ಬಾಡಿಗೆಯನ್ನು ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಚೌಡೇಶ್ವರಿ ಇಂಡಿಯನ್ ಗ್ಯಾಸ್ ವಿತರಕರ ಕಚೇರಿಯ ಮುಂಭಾಗ ಗ್ರಾಮೀಣ ಪ್ರದೇಶದ ಮತ್ತು ನಗರ ಪ್ರದೇಶದ ಜನರು ಸಿಲಿಂಡರ್ ಗಾಗಿ ಮುಗಿಬಿದ್ದರು.ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಧಿಕಾರಿಗಳು ಕ್ರಮವಹಿಸಿ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುವುದನ್ನು ತಡೆ ಹಿಡಿದು ಗ್ಯಾಸ್ ಬುಕಿಂಗ್ ಮಾಡಿದ ಕನಿಷ್ಠ 7 ರಿಂದ 10 ದಿನಗಳ ಒಳಗೆ ಸಿಲಿಂಡರ್ ದೊರಕುವಂತೆ ಕ್ರಮವಹಿಸಬೇಕು. ಬುಕ್ ಮಾಡಿ ಹೆಚ್ಚು ದಿನ ಆದರೂ ಸಹ ಗ್ರಾಹಕರಿಗೆ ಸಿಲಿಂಡರ್ ವಿಸ್ತರಿಸದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಸಿಬ್ಬಂದಿಗಳ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹುಣಸನಾಳು ಗ್ರಾಮದ ಲಕ್ಷ್ಮಮ್ಮ ಮಾತನಾಡಿ, ನಾವು ಸಿಲಿಂಡರ್ ಬುಕ್ ಮಾಡಿ ಸುಮಾರು 20 ದಿನ ಕಳೆದಿದೆ, ದಿನನಿತ್ಯ ಗ್ಯಾಸ್ ಹೊತ್ತು ಗ್ಯಾಸ್ ಏಜೆನ್ಸಿ ಯವರ ಆಟೋಗಳು ಗ್ರಾಮಕ್ಕೆ ಬರುತ್ತವೆ ಆದರೂ ಸಹ ನಮಗೆ ಸಿಲಿಂಡರ್ ಕೊಡುತ್ತಿಲ್ಲ, ಆದರೆ ಕೆಲವರು ಬುಕ್ ಮಾಡಿ ಕೇವಲ ಎರಡು ದಿನಕ್ಕೆ ಅವರಿಗೆ ಸಿಲಿಂಡರ್ ಸಿಗುತ್ತಿದೆ, ಅಲ್ಲದೆ ಸಿಲಿಂಡರ್ ಕೊಡುವ ಡೆಲಿವರಿ ಸಿಬ್ಬಂದಿ ನಿಗದಿತ ಅವಧಿಗೆ ಸಿಲಿಂಡರ್ ಕೊಡದೆ ಒಂದು ಸಾವಿರ ಸಿಲಿಂಡರ್ ಗೆ ಎರಡು ಸಾವಿರ ಪಡೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಮತ್ತೆ ಬಾಡಿಗೆ ಆಟೋ ಮಾಡಿಕೊಂಡು ಸ್ಥಳಕ್ಕೆ ಬಂದರೂ ಸಹ ಸಿಲಿಂಡರ್ ವಿತರಿಸಲಿಲ್ಲ, ಸಿಲಿಂಡರ್ ನಿಮ್ಮ ಗ್ರಾಮಕ್ಕೆ ಬರುತ್ತದೆ ಹೋಗಿ ಎಂದು ಹೇಳುತ್ತಿದ್ದಾರೆ, ನಾಳೆಯೊಳಗೆ ಸಿಲಿಂಡರ್ ವಿತರಿಸದೆ ಇದ್ದಲ್ಲಿ ಗ್ರಾಮಸ್ಥರ ಒಡಗೂಡಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.