ಮಹಾಲಕ್ಷ್ಮಿ ಸಮೇತ ಶ್ರೀಗುಂಜಾ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

KannadaprabhaNewsNetwork |  
Published : Apr 03, 2026, 01:15 AM IST
50 | Kannada Prabha

ಸಾರಾಂಶ

ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ರಥಗಳನ್ನು ಎಳೆದು ಸಂಭ್ರಮಿಸಿದರು. ಶುಭ ಮಿಥುನ ಲಗ್ನದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಅರ್ಚಕ ವೃಂದವರು ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದರು. ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯ ಮಂಟಪೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ತ್ರಿವೇಣಿ ಸಂಗಮ ಹಾಗೂ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಟಿ. ನರಸೀಪುರ ಮಹಾಲಕ್ಷ್ಮಿ ಸಮೇತ ಶ್ರೀ ಗುಂಜಾ ನರಸಿಂಹಸ್ವಾಮಿ ಅವರ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ರಥಗಳನ್ನು ಎಳೆದು ಸಂಭ್ರಮಿಸಿದರು.

ಶುಭ ಮಿಥುನ ಲಗ್ನದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಅರ್ಚಕ ವೃಂದವರು ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದರು. ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯ ಮಂಟಪೋತ್ಸವ ನಡೆಯಿತು. ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ವೇದ ಮಂತ್ರ ಪಠಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಧ್ಯಾಹ್ನ 12.30ರ ವೇಳೆಗೆ ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ರಥದ ಚಕ್ರಕ್ಕೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ತೇರಿನ ಹಗ್ಗ ಹಿಡಿದು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

12.50ರ ಸುಮಾರಿಗೆ ಆರಂಭಗೊಂಡ ರಥವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಮಾರು ಎರಡು ಕಿ.ಮೀ ನಷ್ಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯಾವುದೇ ಅಡ್ಡಿ ಆತಂಕವಿಲ್ಲದೆ ಸ್ವಸ್ಥಾನಕ್ಕೆ ತಲುಪಿತು.

ರಥವು ಪ್ರಮುಖ ಬೀದಿಗಳಲ್ಲಿ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಹರಕೆ ತೀರಿಸಿಕೊಂಡರು. ನವ ವಧುವರರು ಇಷ್ಟಾರ್ಥ ನೆರವೇರಿಸುವಂತೆ ಕೋರಿಕೊಂಡರು.

ರಥೋತ್ಸವದ ಹಿನ್ನೆಲೆ ಪಟ್ಟಣ ಸೇರಿದಂತೆ ಗುಂಜಾನರಸಿಂಹ ಸ್ವಾಮಿ ದೇವಸ್ಥಾನ ಜನ ಸಾಗರದಿಂದ ತುಂಬಿ ಹೋಗಿತ್ತು. ಈ ಬಾರಿಯು ಯುವಕರ ಬಣ್ಣದೋಕುಳಿಗೆ ನಿಷೇಧ ಹೇರಲಾಗಿತ್ತು. ನೆತ್ತಿ ಸುಡುವ ಸುಡು ಬಿಸಿಲಿನ ನಡುವೆಯೂ ಸಹಸ್ರಾರು ಮಂದಿಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು.

ಪ್ರಸಾದ ವಿತರಣೆ - ವಿವಿಧ ಸಂಘ ಸಂಸ್ಥೆಗಳವರು ರಥೊತ್ಸವಕ್ಕೆ ಆಗಮಿಸಿ ಬಿಸಿಲಿನ ಬೇಗೆಯಿಂದ ಬಳಲಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ರೈಸ್ ಬಾತ್, ಮೊಸರನ್ನ, ಪುಳಿಯೋಗರೆ, ಲಾಡು, ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಿಸಿದರು. ಇದೇ ಮೊದಲ ಬಾರಿಗೆ ವಜ್ರಮಲೆ ಮಹದೇಶ್ವರ ಸಂಘದವರು ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಭದ್ರತಾ ಕಾರ್ಯಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ರಥೋತ್ಸವದ ಹಿನ್ನೆಲೆ ದೇವಾಲಯದಲ್ಲಿ ಏ.1ರಿಂದದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಏ. 3ರಂದು ತಿರುನಾಳ್ ಕಟ್ಲೆ ಉತ್ಸವ, ಡೋಲೋತ್ಸವ, ಶಯನೋತ್ಸವ, 4ರಂದು ಅಭವೃತ ಸ್ನಾನ, ಧ್ವಜಾರೋಹಣ, 5ರಂದು ಮಹಾಭಿಷೇಕ ಹಾಗೂ ಹನುಮಂತೋತ್ಸವ ಹಾಗು 6ರಂದು ವೈಮಾಳಿಗೆ ಉತ್ಸವದೊಂದಿಗೆ ಜಾತ್ರೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. ಆರ್.ಐ. ಮಹೇಂದ್ರ, ದೇವಸ್ಥಾನದ ಪಾರುಪತ್ತೇದಾರ್ ದೀಪು, ಸೆಸ್ಕ್‌ ಎಇಇ ವೀರೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ