ಶಿರಸಿಯಲ್ಲಿ ಬೆಳೆವಿಮೆಗಾಗಿ ಬೀದಿಗಿಳಿದ ಅನ್ನದಾತರು, ತೋಟಗಾರಿಕಾ ಇಲಾಖೆಗೆ ಬೀಗ ಹಾಕಲು ಯತ್ನ

KannadaprabhaNewsNetwork |  
Published : Jan 14, 2025, 01:01 AM IST
ಪೊಟೋ೧೩ಎಸ್.ಆರ್.ಎಸ್೨ ( ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿದರು.) | Kannada Prabha

ಸಾರಾಂಶ

ಕಳೆದ ಎರಡು ವರ್ಷದ ಹಿಂದೆ ಬೆಳೆವಿಮೆ ಕಡಿಮೆ ಹಾಕಿದ್ದರೂ ಸುಮ್ಮನಿದ್ದೆವು. ಈಗ ಕಂಪನಿಯಿಂದಾಗಿ ವಿಳಂಬವಾಗುತ್ತಿದ್ದು, ಈ ಹಣಕ್ಕೆ ನಮಗೆ ಬಡ್ಡಿ ನೀಡುತ್ತೀರಾ? ಯಾವ ಕಾರಣಕ್ಕೆ ತಡ ಆಗಿದೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಬೇಕು. ಇಲ್ಲದಿದ್ದರೆ ಅಧಿಕಾರಿಗಳಿಗೆ ಮನೆಗೆ ಹೋಗಲು ಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಶಿರಸಿ: ಜಿಲ್ಲೆಯ ರೈತರಿಗೆ ಹವಾಮಾನ ಆಧರಿತ ಬೆಳೆವಿಮೆ ಬಿಡುಗಡೆಯಾಗಿಲ್ಲ. ಬೆಳೆವಿಮೆ ಕಂಪನಿಯ ನಿರ್ಲಕ್ಷ್ಯದಿಂದ ರೈತರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿ ಸೋಮವಾರ ನೂರಾರು ರೈತರು ನಗರದ ತೋಟಗಾರಿಕಾ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಇಲಾಖೆಗೆ ಬೀಗ ಹಾಕಲು ಯತ್ನಿಸಿದರು.ನಗರದ ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದ ರೈತರು ಮೆರವಣಿಗೆ ಮೂಲಕ ತೋಟಗಾರಿಕಾ ಇಲಾಖೆ ಕಚೇರಿ ತಲುಪಿ, ವಿಮೆ ಕಂಪನಿಯ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಧಿಕ್ಕಾರ ಕೂಗಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ವಿಮಾ ಕಂಪನಿ ನಾಚಿಕೆಗೆಟ್ಟಿದೆ. ರೈತರ ಕಷ್ಟ ವಿಮಾ ಕಂಪನಿಗೆ ಅರ್ಥವೇ ಆಗುವುದಿಲ್ಲ. ಬೇರೆ ಜಿಲ್ಲೆಯಲ್ಲಿ ಈಗಾಗಲೇ ಬೆಳೆವಿಮೆ ಪರಿಹಾರ ನೀಡಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಮಾತ್ರ ರೈತರಿಗೆ ಮೋಸ ಮಾಡಲಾಗುತ್ತಿದೆ. ನಾವು ತೋಟಗಾರಿಕೆ ಇಲಾಖೆ ತಾಲೂಕು ಅಧಿಕಾರಿಗಳಿಗೆ ಬೈದರೆ ಪ್ರಯೋಜನವಿಲ್ಲ. ವಿಮಾ ಕಂಪನಿ ಕಾಳಜಿ ವಹಿಸಬೇಕು. ಬೆಳೆವಿಮೆ ಮಂಜೂರಾಗದ ಹಿನ್ನೆಲೆ ತಿಂಗಳಿನ ಹಿಂದೆಯೇ ದಾಸನಕೊಪ್ಪದಲ್ಲಿ ಪ್ರತಿಭಟನೆ ಮಾಡಿದಾಗ ಅಧಿಕಾರಿಗಳು ನಿಗದಿತ ಸಮಯದಲ್ಲಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಹಣ ಬಿಡುಗಡೆ ಆಗಿಲ್ಲ. ವಿಮಾ ಕಂಪನಿಗಳು ರೈತರಿಂದ ಕಂತು ತುಂಬಿಸಿಕೊಳ್ಳುವಾಗ ನಿಗದಿತ ಸಮಯ ಮಿತಿ ಹೇರುತ್ತಾರೆ. ಆದರೆ, ಪರಿಹಾರ ನೀಡಲು ಮಾತ್ರ ಅವರಿಗೆ ಸಮಯ ಮಿತಿ ಇರುವುದಿಲ್ಲ.

ಕಳೆದ ಕೆಲ ವರ್ಷಗಳಿಂದ ವಿಮಾ ಪರಿಹಾರವನ್ನು ಹೋರಾಟದ ಮೂಲಕವೇ ಪಡೆಯುವಂತಾಗಿದೆ. ಇನ್ನು ಕಾಯುತ್ತ ಕುಳಿತುಕೊಳ್ಳಲು ಅಥವಾ ವಿಮಾ ಕಂಪನಿ ಹೇಳುವ ಕಥೆ ಕೇಳುವ ವ್ಯವಧಾನ ನಮಗಿಲ್ಲ. ಯಾವಾಗ ವಿಮಾ ಹಣ ನೀಡುತ್ತೇವೆ ಎಂಬ ಬಗ್ಗೆ ಕಂಪನಿಯಿಂದ ನಮಗೆ ಸ್ಪಷ್ಟತೆ ಬೇಕು. ಕಳೆದ ಎರಡು ವರ್ಷದ ಹಿಂದೆ ಬೆಳೆವಿಮೆ ಕಡಿಮೆ ಹಾಕಿದ್ದರೂ ಸುಮ್ಮನಿದ್ದೆವು. ಈಗ ಕಂಪನಿಯಿಂದಾಗಿ ವಿಳಂಬವಾಗುತ್ತಿದ್ದು, ಈ ಹಣಕ್ಕೆ ನಮಗೆ ಬಡ್ಡಿ ನೀಡುತ್ತೀರಾ? ಯಾವ ಕಾರಣಕ್ಕೆ ತಡ ಆಗಿದೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಬೇಕು. ಇಲ್ಲದಿದ್ದರೆ ಅಧಿಕಾರಿಗಳಿಗೆ ಮನೆಗೆ ಹೋಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಗೌಡ ಮಾತನಾಡಿ, ರೈತರು ಭಿಕ್ಷುಕರಲ್ಲ. ಬೆಳೆಹಾನಿ ಆದಾಗ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಷ್ಟವಾದರೂ ನಾವು ಪ್ರಿಮಿಯಂ ತುಂಬುತ್ತಿದ್ದೇವೆ. ಈ ವರ್ಷ ಅತಿವೃಷ್ಟಿಯಿಂದಾಗಿ ರೈತರ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಇಲಾಖೆಗೆ ಗಮನದಲ್ಲಿದೆಯಾ? ವಿಮೆ ಪರಿಹಾರ ಪಡೆಯಲು ಎಷ್ಟು ಸಲ ಹೋರಾಟ ಮಾಡಬೇಕು? ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಮಾ ಕಂಪನಿಯ ನೋಡೆಲ್ ಅಧಿಕಾರಿ ಅಣ್ಣಪ್ಪ ನಾಯ್ಕ, ರಾಜ್ಯದ ಉಳಿದ ೧೦ ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ ಆಗಿದ್ದರೂ ಉತ್ತರ ಕನ್ನಡದಲ್ಲಿ ಕೆಲ ಗ್ರಾಮ ಪಂಚಾಯಿತಿಯಲ್ಲಿ ಸ್ಥಳೀಯ ಮಳೆ ದಾಖಲೆ ಹಾಗೂ ಕೆಎಸ್ಡಿಎನ್ ಮಳೆ ದಾಖಲಾತಿಯಲ್ಲಿ ಹೊಂದಾಣಿಕೆ ಆಗಿಲ್ಲ. ಡಿ. ೪ರೊಳಗೆ ಈ ಮಳೆ ದಾಖಲಾತಿ ವಿಮಾ ಕಂಪನಿಗೆ ಸಂದಾಯವಾಗಬೇಕಿತ್ತಾದರೂ ದಾಖಲೆ ಸಲ್ಲಿಸುವಲ್ಲಿ ವಿಳಂಬವಾಗಿರುವ ಕಾರಣ ವಿಮಾ ಹಣ ಬಿಡುಗಡೆಯಾಗಿಲ್ಲ. ಜಿಲ್ಲೆಯ ೧೩೬ ಗ್ರಾಮ ಪಂಚಾಯಿತಿಗಳಲ್ಲಿ ೫೯ ಗ್ರಾಮ ಪಂಚಾಯಿತಿಗಳ ರೈತರಿಗೆ ಹಣ ಬಿಡುಗಡೆ ಆಗಿದ್ದು, ಶೀಘ್ರದಲ್ಲಿಯೇ ರೈತರ ಖಾತೆಗೆ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ ₹೫೮ ಕೋಟಿ ವಿಮಾ ಕಂತನ್ನು ರೈತರು ತುಂಬಿದ್ದಾರೆ ಎಂದರು.ರೈತ ಮುಖಂಡ ವೀರಭದ್ರ ನಾಯ್ಕ ಸಿದ್ದಾಪುರ ಮಾತನಾಡಿದರು. ರೈತರಾದ ದ್ಯಾಮಣ್ಣ ದೊಡ್ಮನಿ, ನಾಗ್ಪಪ ನಾಯ್ಕ, ಪ್ರಮೋದ್ ಜಕಲಣ್ಣನವರ್, ರಾಜೇಶ ಖಂಡ್ರಾಜಿ, ಹಾಲಪ್ಪ ಜಕಲಣ್ಣನವರ್, ಮಂಜುನಾಥ ಚಲವಾದಿ, ನವೀನ, ನಾಗರಾಜ, ಮೋಹನ ನಾಯ್ಕ ಕಿರವತ್ತಿ, ಶಶಿಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

15ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥತೋಟಗಾರಿಕೆ ಇಲಾಖೆಗೆ ಆಗಮಿಸಿದ ರೈತರು, ಇಲಾಖೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಲು ಯತ್ನಿಸಿದರು. ಆದರೆ, ಪೊಲೀಸ್ ಇಲಾಖೆ ಇದಕ್ಕೆ ಅವಕಾಶ ನೀಡದಿದ್ದಾಗ ರೈತರೊಂದಿಗೆ ವಾಗ್ವಾದ ನಡೆಯಿತು. ಈ ವೇಳೆ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿ ಪ್ರತಿನಿಧಿಗಳು, ಜ. ೧೫ರಂದು ಬೆಂಗಳೂರಿನಲ್ಲಿ ಹವಾಮಾನ ಆಧರಿತ ಬೆಳೆವಿಮೆ ಕುರಿತು ಸಭೆ ನಡೆಸಲಾಗುತ್ತಿದೆ. ಈ ಸಮಸ್ಯೆಯ್ನನೂ ಅಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಮಂಜೂರಾತಿಗೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ರಸ್ತೆತಡೆ: ಬೆಳೆವಿಮೆ ಮಂಜೂರಿಗೆ ಆಗ್ರಹಿಸಿ ಜ. ೧೬ರಂದು ಮುಂಡಗೋಡ ತಾಲೂಕಿನಲ್ಲಿ ರಸ್ತೆತಡೆ ನಡೆಸಲಾಗುತ್ತಿದೆ. ಅಷ್ಟರೊಳಗಾಗಿ ರೈತರ ಖಾತೆಗೆ ಹಣ ಜಮಾ ಆಗಬೇಕು. ವಿಮಾ ಕಂಪೆನಿ ಇನ್ನೂ ನಿರ್ಲಕ್ಷ್ಯದ ಧೋರಣೆ ತಾಳಿದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ರಾಘವೇಂದ್ರ ನಾಯ್ಕ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ