ಅಪ್ಪಾರಾವ್ ಸೌದಿ
ದೇಶಾದ್ಯಂತ ಕಳೆದೆರಡು ತಿಂಗಳುಗಳಿಂದ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣಾ ಸಮರದಲ್ಲಿ ಬೀಳೋರ್ಯಾರು ಗೆಲ್ಲೋರ್ಯಾರು ಎಂಬ ಕುತೂಹಲಕ್ಕೆ ಇಂದು ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಉತ್ತರ ಸಿಗಲಿದೆ.
ಬೀದರ್ ಲೋಕಸಭಾ ಕ್ಷೇತ್ರದ ಮತ ಎಣಿಕೆ ಇಲ್ಲಿನ ಬಿವಿಬಿ ಕಾಲೇಜು ಕಟ್ಟಡದಲ್ಲಿ ಜೂ.4ರ ಬೆಳಗ್ಗೆ 8ಕ್ಕೆ ಆರಂಭವಾಗಲಿದ್ದು ಈ ಹಿನ್ನೆಲೆ ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿದೆ.ಕಾಂಗ್ರೆಸ್ ಅಭ್ಯರ್ಥಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ, ಹಾಲಿ ಸಂಸದ ಕೇಂದ್ರ ಸಚಿವ ಭಗವಂತ ಖೂಬಾ ಸೇರಿ ಒಟ್ಟು 18 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಹೊರಬರಲಿದೆ. ಇನ್ನು ಅಭ್ಯರ್ಥಿಗಳ್ಯಾರೂ ಬೇಡ ಎಂದು ನೋಟಾಗೆ ಎಷ್ಟು ಜನ ಮತದಾನ ಮಾಡಿದ್ದಾರೆ ಎಂಬುವದೂ ಸ್ಪಷ್ಟವಾಗುತ್ತದೆ.
ಈ ಹಿಂದಿನ 2014 ಮತ್ತು 2019ರ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದ ಮತದಾನ ಈ ಬಾರಿ ನಡೆದು ಚುನಾವಣಾ ಅಖಾಡಾ ಸಾಕಷ್ಟು ರಂಗೇರುವಂತೆ ಮಾಡಿದ್ದಂತೂ ನಿಜ. ಮತದಾನ ಮುಗಿದ ದಿನದಿಂದ ಇಲ್ಲಿಯವರೆಗೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಎಲ್ಲೆಡೆ ಬಲು ಜೋರು ಹಿಡಿದಿದ್ದು, ಇದಕ್ಕೆಲ್ಲ ಇದೀಗ ಉತ್ತರ ಸಿಗಲಿದೆ.
ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಬಿಜೆಪಿ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರ 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ನಂತರ ಕಾಂಗ್ರೆಸ್ ಅಧಿಪತ್ಯ ಸಾಧಿಸಿತ್ತಾದರೆ, ಕಳೆದ 2014 ಮತ್ತು 2019ರ ಚುನಾವಣೆಯಲ್ಲಿ ಈ ಕೋಟೆಯನ್ನು ಪುನಃ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸಫಲವಾಗಿತ್ತು. ಇದೀಗ ಅದನ್ನು ಮುಂದುವರೆಸುವತ್ತ ಎದುರಾಳಿ ಕಾಂಗ್ರೆಸ್‌ಗೆ ಭಾರಿ ಪೈಪೋಟಿ ನೀಡಿದೆಯಾ ಎಂಬುವದಕ್ಕೆ ಉತ್ತರ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಳೆದ ಬಾರಿ ಅಚ್ಚರಿಯಂಬಂತೆ ಭರ್ಜರಿ ಜಯ ದಾಖಲಿಸಿದ್ದರೆ ಈ ಬಾರಿಯೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳು, ಮೋದಿ ಹವಾ ನಮ್ಮತ್ತ ಮತದಾರನನ್ನು ಸೆಳೆದುಕೊಡುವ ಭರವಸೆಯಿದೆ ಎಂಬ ವಾದ ಇವರದ್ದಾಗಿದ್ದರೂ ದರ್ಪದ ವರ್ತನೆ, ನಿರ್ಲಕ್ಷ್ಯತನದ ಆರೋಪಗಳಿಂದಾಗಿ ಈ ಬಾರಿ ಸುನಾಮಿಯಂತೆ ಕಾಡಿದ ಬಿಜೆಪಿ ಶಾಸಕರುಗಳ, ಪ್ರಮುಖ ಕಾರ್ಯಕರ್ತರು ಮತ್ತು ಮುಖಂಡರುಗಳು ವಿರೋಧಾಭಾಸ ಅವರ ಗೆಲುವಿನ ನಾಗಾಲೋಟ ಕಿತ್ತುಕೊಳ್ಳುತ್ತೇನೋ ಎಂಬ ಆತಂಕವನ್ನು ಪಕ್ಷದ ಮುಂದೆ ಬಂದಿದ್ದಂತೂ ನಿಜ.
ಇತರೆ ಪಕ್ಷಗಳು ಮತ್ತು ಪಕ್ಷೇತರರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಯಾವ ಪ್ರಮುಖ ಪಕ್ಷದ ಮತಗಳು ಹೋಳಾಗಲಿವೆ ಎಂಬ ಲೆಕ್ಕಾಚಾರವೂ ಅಭ್ಯರ್ಥಿಗಳನ್ನು ಕಾಡಲಾರಂಭಿಸಿದೆಯಾದರೆ ಇಲ್ಲೇನಿದ್ದರೂ ನೇರ ಸ್ಪರ್ಧೆ ಖಚಿತ.