ಸುಭದ್ರ ಭಾರತದ ಜನಪ್ರಿಯ ಬಜೆಟ್: ನಳಿನ್ ಕುಮಾರ್ ಕಟೀಲ್

KannadaprabhaNewsNetwork |  
Published : Feb 02, 2024, 01:03 AM IST
ವೇದವ್ಯಾಸ ಕಾಮತ್‌ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದರೂ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅಭಿವೃದ್ಧಿಯ ಚಿಂತನೆ, ಸುಭದ್ರ ಭಾರತದ ದೃಷ್ಟಿಕೋನ ಇರಿಸಿ ಮಂಡಿಸಲಾದ ಜನಪ್ರಿಯ ಬಜೆಟ್ ಆಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಆತ್ಮನಿರ್ಭರ ಭಾರತವನ್ನು ಪ್ರತಿಬಿಂಬಿಸಿದ ಬಜೆಟ್. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದರೂ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅಭಿವೃದ್ಧಿಯ ಚಿಂತನೆ, ಸುಭದ್ರ ಭಾರತದ ದೃಷ್ಟಿಕೋನ ಇರಿಸಿ ಮಂಡಿಸಲಾದ ಜನಪ್ರಿಯ ಬಜೆಟ್ ಆಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದ್ದಾರೆ.

ಈ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗದ ಅನುಕೂಲಕ್ಕಾಗಿ ವಿಶೇಷ ಒತ್ತು ನೀಡಲಾಗಿದೆ. ಸಾಮಾಜಿಕ ನ್ಯಾಯವನ್ನು ಬಿಂಬಿಸುವ ಬಜೆಟ್ ಆಗಿದ್ದು, ಪ್ರವಾಸೋದ್ಯಮ, ಮೀನುಗಾರಿಕೆ, ರೈಲ್ವೆ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದೆ. ಒಟ್ಟಿನಲ್ಲಿ ವಿತ್ತೀಯ ಶಿಸ್ತಿನ ಬಜೆಟ್ ಆಗಿದ್ದು, ಈ ಮೂಲಕ ಕೇಂದ್ರ ಸರ್ಕಾರದ ಸ್ಥೈರ್ಯವನ್ನು ಬಿಂಬಿಸಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಾವಲಂಬನೆಯ ಭಾರತದ ಸಂಕೇತ: ಶಾಸಕ ಕಾಮತ್‌

ಮಂಗಳೂರು: ದೇಶ ಚುನಾವಣೆಯ ಹೊಸ್ತಿಲಲ್ಲಿದ್ದರೂ ಯಾವುದೇ ಓಲೈಕೆಯ ಘೋಷಣೆಗಳಿಲ್ಲದ, ಭವ್ಯ ಭಾರತದ ಭವಿಷ್ಯದ ದೃಷ್ಟಿಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟ್ ಭಾರತವೀಗ ಸ್ವಾವಲಂಬಿ ಹಾಗೂ ಹೊಸ ದಿಕ್ಕಿನತ್ತ ಸಾಗುತ್ತಿರುವುದರ ಸಂಕೇತ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಇದು ದೇಶದ ಭರವಸೆಯ ಬಜೆಟ್ ಆಗಿದ್ದು, ಬಿಜೆಪಿ ಸರ್ಕಾರದ ಮುಖ್ಯ ಗುರಿಯೇ ದೇಶದ ಮೂಲಭೂತ ಸೌಕರ್ಯದ ಅಭಿವೃದ್ಧಿ. ಪಿಎಂ ಆವಾಸ್ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ 3 ಕೋಟಿ ಮನೆ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದ್ದು, ಬಡವರ ಸ್ವಂತ ಸೂರಿನ ಕನಸು ನನಸಾಗಲಿದೆ. ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೂ ಆಯುಷ್ಮಾನ್ ಯೋಜನೆ ವಿಸ್ತರಣೆ ಮಾಡಲಾಗಿದೆ. ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಹಿಂದಿನ ಸ್ಥಿತಿಯನ್ನೇ ಅನುಸರಿಸಿದ್ದು ಮಧ್ಯಮ ವರ್ಗಕ್ಕೆ ಅನುಕೂಲಕರವಾಗಲಿದೆ ಎಂದಿದ್ದಾರೆ.

ಪಿಎಂ ಗತಿಶಕ್ತಿ ಮೂಲಕ ಮೂರು ಪ್ರಮುಖ ರೈಲ್ವೆ ಕಾರಿಡಾರ್‌ಗಳ ನಿರ್ಮಾಣದ ಗುರಿ, ದೇಶದ ಎಲ್ಲ ನಗರಗಳಿಗೂ ಮೆಟ್ರೋ ಯೋಜನೆಗಳನ್ನು ವಿಸ್ತರಿಸುವ ಯೋಜನೆ, ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಉತ್ತೇಜನ, ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ, ರಸ್ತೆ-ರೈಲು-ಬಂದರುಗಳ ಕಾರಿಡಾರ್ ನಿರ್ಮಾಣ, ಡೈರಿಗಳಿಗೆ ರಾಷ್ಟ್ರೀಯ ಗೋಕುಲ್ ಮಿಷನ್ ನಡಿ ಪ್ರೋತ್ಸಾಹ ಹೀಗೆ ಮಹಿಳೆಯರು, ರೈತರು, ಯುವ ಜನಾಂಗ ಸೇರಿದಂತೆ ಎಲ್ಲ ವರ್ಗದ ಜನರನ್ನೂ ಈ ಮಧ್ಯಂತರ ಬಜೆಟ್‌ನಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕಾಮತ್‌ ಹೇಳಿದ್ದಾರೆ.

ವಿಕಸಿತ ಭಾರತಕ್ಕೆ ಮುನ್ನುಡಿ: ಬೃಜೇಶ್‌ ಚೌಟ

ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ನಿಟ್ಟಿನಲ್ಲಿ ಮಂಡಿಸಿದ ದೂರದೃಷ್ಟಿಯ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಮಧ್ಯಂತರ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಬೃಜೇಶ್‌ ಚೌಟ ಹೇಳಿದ್ದಾರೆ.

ವಿಕಸಿತ ಭಾರತದ 4 ಸ್ತಂಭಗಳಾದ ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸುವ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ. ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಮೀನುಗಾರಿಕೆಗೆ ಹೊಸ ಸಚಿವಾಲಯ ಸ್ಥಾಪನೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಬಡ, ಮಧ್ಯಮ ವರ್ಗದವರ ಅಭಿವೃದ್ಧಿ, ಮೀನುಗಾರರ ಆರ್ಥಿಕತೆಯ ಅಭಿವೃದ್ಧಿಯ ಜೊತೆಗೆ 55 ಲಕ್ಷ ಉದ್ಯೋಗ ಸೃಷ್ಟಿಯಿಂದ ಕರಾವಳಿ ರಾಜ್ಯಗಳ ಅಭಿವೃದ್ಧಿಯ ಜೊತೆಗೆ ನಮ್ಮ ಕರಾವಳಿ ಕರ್ನಾಟಕಕ್ಕೆ ವಿಶೇಷ ಕೊಡುಗೆಯಾಗಲಿದೆ. 6.21 ಲಕ್ಷ ಕೋಟಿ ರು.ಗಳ ರಕ್ಷಣಾ ಕ್ಷೇತ್ರದ ಅನುದಾನ ನಮ್ಮ ಸೇನೆಗೆ ಇನ್ನಷ್ಟು ಬಲ ನೀಡಲಿದೆ. ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ. ಒಟ್ಟಿನಲ್ಲಿ ಮೋದಿ ಅವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್, ಸಬ್ ಕಾ ವಿಶ್ವಾಸ್’ ಎನ್ನುವ ದೂರದೃಷ್ಟಿಯ ಘೋಷಣೆಯನ್ನು ಸಕಾರಗೊಳಿಸುವ, ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಬಜೆಟ್ ಇದಾಗಿದೆ ಎಂದು ಬೃಜೇಶ್‌ ಚೌಟ ಹೇಳಿದ್ದಾರೆ.

ಕೇಂದ್ರದ ಮಧ್ಯಂತರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಕಸಿತ ಭಾರತಕ್ಕೆ ದಾರಿ ತೋರಿಸುವ ಬಜೆಟ್, ಅಭಿವೃದ್ಧಿ ಪಥದಲ್ಲಿ ಸಾಗಲು ಬೇಕಾದ ಬಜೆಟ್ ಇದು ಎಂದಿದ್ದಾರೆ.

ಚುನಾವಣೆ ಬಳಿಕ ಮತ್ತೆ ನರೇಂದ್ರ ಮೋದಿ ಸರ್ಕಾರ ಖಂಡಿತಾ ಬರಲಿದ್ದು, ಆಗ ಪೂರ್ಣ ಬಜೆಟ್ ಮಂಡಿಸುತ್ತೇವೆ. ಮಧ್ಯಂತರ ಬಜೆಟ್‌ನಲ್ಲಿ ಸ್ವಂತ ಮನೆಯಿಲ್ಲದ ಜನರಿಗೆ ಮನೆ ಕಟ್ಟಿಕೊಡುವ ವ್ಯವಸ್ಥೆ ಆಗಲಿದೆ. ಸರ್ವೈಕಲ್ ಕ್ಯಾನ್ಸರ್‌ಗೆ ಸಂಬಂಧಿಸಿದ ದೊಡ್ಡ ಯೋಜನೆ ಹಾಕಿಕೊಳ್ಳಲಾಗಿದೆ. ರೈತರಿಗೆ ಪೋಸ್ಟ್ ಹಾರ್ವೆಸ್ಟ್‌ಗೆ ಸಹಾಯ ಮಾಡುವ ಕೆಲಸ ಮಾಡಲಾಗಿದೆ. ಸಾಮಾನ್ಯವಾಗಿ ಚುನಾವಣೆ ಹೊಸ್ತಿಲಲ್ಲಿ ಜಾರಿ ಮಾಡಲು ಸಾಧ್ಯ ಇಲ್ಲದ ಯೋಜನೆಗಳನ್ನು ಘೋಷಿಸಲಾಗುತ್ತದೆ. ಆದ್ರೆ ನಿರ್ಮಲಾ ಸೀತಾರಾಮನ್‌ ಅವರು ಅಂತಹ ಯಾವುದೇ ಗೊಂದಲವಿಲ್ಲದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ಗಿಂತ ಮೊದಲು ಎಲ್ಪಿಜಿ, ಡಿಸೇಲ್ ದರ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ